ಬೆಂಗಳೂರು: ಟೆಕ್ ಸಮಿಟ್ 25 ವರ್ಷ ಪೂರೈಸುತ್ತಿರುವ ಹಿನ್ನೆಲೆ ಈ ಬಾರಿಯ ಬೆಂಗಳೂರು ಟೆಕ್ ಸಮ್ಮಿಟ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಬೆಂಗಳೂರು ಟೆಕ್ ಸಮಿಟ್ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ನವೆಂಬರ್ ಮಾಹೆಯಲ್ಲಿ ಬೆಂಗಳೂರು ಟೆಕ್ ಸಮಿಟ್ ಆಯೋಜಿಸಿರುವ ಪ್ರಯುಕ್ತ ವಿವಿಧ ವಲಯದ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಹಲವಾರು ಸಲಹೆಗಳನ್ನು ಪಡೆದುಕೊಳ್ಳಲಾಗಿದೆ ಎಂದರು.
ಕೈಗಾರಿಕೆಗಳಿಗೆ ಪೂರಕವಾದ ನೀತಿಗಳು, ಎಕೋಸಿಸ್ಟಂ ಮೂಲಸೌಕರ್ಯ, ತಾಂತ್ರಿಕತೆಗಳ ಬಗ್ಗೆ ಬಹಳಷ್ಟು ಸಲಹೆಗಳನ್ನು ಕೈಗಾರಿಕೋದ್ಯಮಿಗಳು ನೀಡಿದ್ದು, ಅವುಗಳನ್ನು ಅನುಷ್ಟಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ತಾಂತ್ರಿಕ ಕ್ಷೇತ್ರಕ್ಕೆ ಹೊಸ ಆಯಾಮ: ಬೆಂಗಳೂರು ಸಮಿಟ್ ತಾಂತ್ರಿಕ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವಲ್ಲಿ ಇಂದಿನ ಸಭೆ ಫಲಪ್ರದವಾಗಿದೆ. ಮುಂಬರುವ ದಿನಗಳಲ್ಲಿ ವಿವಿಧ ಕೈಗಾರಿಕಾ ವಲಯಗಳಿಗೂ ಸರ್ಕಾರ ಇಂಬು ನೀಡಲಿದೆ. ಬೆಂಗಳೂರನ್ನು ವಿಶ್ವದಲ್ಲಿಯೇ ನಂ.1 ಸಿಲಿಕಾನ್ ಸಿಟಿ ಮಾಡುವ ಚಿಂತನೆ ಸರ್ಕಾರಕ್ಕಿದೆ. ಬೆಂಗಳೂರಿನ ಹೊರವಲಯಗಳಲ್ಲಿಯೂ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಗಿದೆ ಎಂದರು.
ಕೋವಿಡ್ ನಿಯಂತ್ರಣ ಪೂರ್ವಭಾವಿ ಸಭೆ: ಕೋವಿಡ್ ಸಭೆ ಇಂದು ಮಧ್ಯಾಹ್ನ ಏರ್ಪಡಿಸಿದ್ದು, ಕೋವಿಡ್ ಸ್ಥಿತಿಗತಿ ಬದಲಾವಣೆ ಕುರಿತು ಚರ್ಚೆ ಕೈಗೊಳ್ಳಲಾಗುವುದು.ಕೋವಿಡ್ ಕುರಿತು ಮಾನ್ಯ ಪ್ರಧಾನಮಂತ್ರಿಗಳು ಏಪ್ರಿಲ್ 27 ರಂದು ಸಭೆ ಕರೆದಿದ್ದಾರೆ. ಅದರ ಪೂರ್ವಭಾವಿಯಾಗಿ ರಾಜ್ಯದ ಕೋವಿಡ್ ಸ್ಥಿತಿಗತಿ, ತಜ್ಞರ ಅಭಿಪ್ರಾಯ, ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಇಂದಿನ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಓದಿ: ನೈಸ್ಗೆ ಹೆಚ್ಚುವರಿಯಾಗಿ ನೀಡಿರುವ 543 ಎಕರೆ ಭೂಮಿ ವಾಪಸ್: ಸಚಿವ ಎಸ್.ಟಿ.ಸೋಮಶೇಖರ್