ಬೆಂಗಳೂರು: ಕರ್ನಾಟಕವನ್ನು ನವ ಉದ್ಯಮದ ರಾಜ್ಯವನ್ನಾಗಿ ಮಾಡಲು ಬಿಯಾಂಡ್ ಬೆಂಗಳೂರು ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವರ್ಚುವಲ್ ಮೂಲಕ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಜನವರಿ 16ನ್ನು ಸ್ಟಾರ್ಟ್‌ಅಪ್ ದಿನ ಎಂದು ಪ್ರಧಾನಿ ಘೋಷಿಸಿದ್ದಾರೆ. 2016ರಲ್ಲಿ ಸ್ಟಾರ್ಟ್‌ಅಪ್ ಕ್ಷೇತ್ರಕ್ಕೆ ಮೋದಿಯಿಂದ ದೊಡ್ಡ ಬೆಂಬಲ ವ್ಯಕ್ತವಾಯಿತು. ದೇಶದಲ್ಲಿ 500 ಇದ್ದ ಸ್ಟಾರ್ಟ್‌ಅಪ್‌ಗಳು ಇಂದು 54,000 ಆಗಿವೆ. 54,000 ಸ್ಟಾರ್ಟ್‌ಅಪ್‌ಗಳಲ್ಲಿ 13,000 ಕರ್ನಾಟಕದಲ್ಲಿ ಪ್ರಾರಂಭವಾಗಿದೆ. ಸ್ಟಾರ್ಟ್‌ಅಪ್ ಯಶಸ್ಸಿನ ರೂವಾರಿ ಪ್ರಧಾನಿ ನರೇಂದ್ರ ಮೋದಿ ಎಂದು ಸಿಎಂ ಬಣ್ಣಿಸಿದರು.
ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಟಾರ್ಟ್ಅಪ್ಗಳನ್ನು ಮಾಡಿರುವುದಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರದ ನೆರವು ನೀಡಲು ಮೋದಿ ಸಲಹೆ ನೀಡಿದ್ದಾರೆ. ಅದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಅತಿಹೆಚ್ಚು ಸ್ಟಾರ್ಟ್‌ಅಪ್‌ಗಳಿರುವುದಕ್ಕೆ ಮೋದಿಯವರೇ ಪ್ರೇರಣೆ ಎಂದರು.
ಐಟಿ-ಬಿಟಿಯಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ 1 ಸ್ಥಾನದಲ್ಲಿದೆ. ಐಟಿ-ಬಿಟಿ ಸರಕುಗಳು ಕರ್ನಾಟಕದಿಂದ ಹೆಚ್ಚಾಗಿ ರಫ್ತಾಗುತ್ತಿವೆ. ಕರ್ನಾಟಕ ಭವಿಷ್ಯದ ಆರ್ಥಿಕತೆಯಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಸ್ಟಾರ್ಟ್‌ಅಪ್‌ಗಳಿಗೆ ರಾಜ್ಯದಲ್ಲಿ ಮಾರ್ಗದರ್ಶನ, ವೈಜ್ಞಾನಿಕ ಬೆಂಬಲ ಸ್ಟಾರ್ಟ್‌ಅಪ್ ಸೆಲ್ ಮೂಲಕ ಸ್ಟಾರ್ಟ್‌ಅಪ್ ಪ್ರಾರಂಭಕ್ಕೆ ನೆರವು ನೀಡಲಾಗುತ್ತದೆ ಎಂದು ಹೇಳಿದರು.
ಸ್ಟಾರ್ಟ್‌ಅಪ್ ಸ್ಥಾಪಿಸಲು ʼಎಲಿವೇಟ್ 100ʼ ಮೂಲಕ ಸಹಾಯ ನೀಡಲಾಗುತ್ತಿದೆ. ಎಸ್‌ಸಿ/ಎಸ್‌ಟಿ ಜನರಿಗೂ ಸ್ಟಾರ್ಟ್‌ಅಪ್ ಸ್ಥಾಪಿಸಲು ಉತ್ತೇಜನ ನೀಡುತ್ತಿದ್ದು, ಎಸ್‌ಸಿ/ಎಸ್‌ಟಿ, ಒಬಿಸಿಗೆ ಉತ್ತೇಜನಕ್ಕಾಗಿ ಎಲಿವೇಟ್ 75 ಪ್ರಾರಂಭಿಸಲಾಗಿದೆ. ಸ್ಟಾರ್ಟ್‌ಅಪ್‌ನಲ್ಲಿ ತೊಡಗಿಸಿಕೊಳ್ಳಲು ಹೆಣ್ಣುಮಕ್ಕಳಿಗೆ ಉತ್ತೇಜಿಸಲು ಎಲಿವೆಟ್ 25 ಯೋಜನೆ ರೂಪಿಸಿದ್ದು, ಇಲ್ಲಿವರೆಗೂ 482 ಸ್ಟಾರ್ಟ್‌ಅಪ್‌ಗಳಿಗೆ 120 ಕೋಟಿ ರೂ. ನೆರವು ನೀಡಲಾಗಿದೆ ಎಂದು ತಿಳಿಸಿದರು.
ನವ ಉದ್ಯಮದ ರಾಜ್ಯವನ್ನಾಗಿ ಮಾಡಲು ಬಿಯಾಂಡ್ ಬೆಂಗಳೂರು ಜಾರಿಗೊಳಿಸಲಾಗುತ್ತದೆ. ಬಿಯಾಂಡ್ ಬೆಂಗಳೂರು ಮೂಲಕ ಎಲ್ಲ ಜಿಲ್ಲೆಗಳಲ್ಲಿ ಐಟಿ/ಬಿಟಿ ಸ್ಥಾಪನೆ ಮಾಡಲಾಗುತ್ತದೆ. ಶಾಲೆಗಳಲ್ಲಿ ಇನೋವೇಟಿವ್, ಎಂಟರ್‌ಪ್ರೈನರ್‌ಶಿಫ್ ಬೆಳೆಸಲು ಉತ್ತೇಜನ ನೀಡಲಿದ್ದು, ಮುಂದಿನ ವರ್ಷದಿಂದ ಪಠ್ಯಪುಸ್ತಕಗಳಲ್ಲಿ ಉದ್ಯಮಶೀಲತೆ, ಆವಿಷ್ಕಾರ ಅಳವಡಿಕೆ ಮಾಡಲಾಗುತ್ತದೆ. ಡಿಪ್ಲೋಮಾ ಕಾಲೇಜುಗಳನ್ನು ಉನ್ನತೀಕರಿಸಲೂ ಸರ್ಕಾರದ ಚಿಂತನೆ ಇದೆ ಎಂದರು.
ಬೆಂಗಳೂರಿನಲ್ಲಿ 180ಕ್ಕೂ ಹೆಚ್ಚು ವಿವಿಧ ಸಂಶೋಧನಾ ಕೇಂದ್ರಗಳಿವೆ. ಕೃಷಿ, ತೋಟಗಾರಿಕೆ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಸ್ಟಾರ್ಟ್ ಅಪ್ ಬರಬೇಕು. ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣದಲ್ಲೂ ಕೂಡ ಸ್ಟಾರ್ಟ್‌ಅಪ್ ಬರಲಿ, ಸ್ಟಾರ್ಟ್‌ಅಪ್ ಮೂಲಕ ಮಹಿಳೆಯರ ಅಭಿವೃದ್ಧಿಗೆ ವಿವಿಧ ಯೋಜನೆ ರೂಪಿಸಲಾಗುತ್ತಿದೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಲ್ಲಿ ಕರ್ನಾಟಕದ್ದು ಪ್ರಮುಖ ಪಾತ್ರ. ತಂತ್ರಜ್ಞಾನ, ವೈಜ್ಞಾನಿಕ ಕ್ಷೇತ್ರಗಳ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಆ ನಿಟ್ಟಿನಲ್ಲಿ ನಮ್ಮ ಯೋಜನೆಗಳು ಇರಲಿವೆ ಎಂದು ತಿಳಿಸಿದರು.
ಓದಿ: ಕೊರೊನಾ ಒಂದು ಮೆಡಿಕಲ್ ಮಾಫಿಯಾ.. ಇದು ಗೊಣ್ಣೆ ಸುರಿಸುವ ವೈರಸ್ ಅಷ್ಟೇ.. ಡಾ. ಟಿ ಹೆಚ್ ಆಂಜನಪ್ಪ