ಬೆಂಗಳೂರು: ಸಿದ್ದರಾಮಯ್ಯ ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸ್ಗಳನ್ನು ಹಿಂದಕ್ಕೆ ಪಡೆದಿದ್ದರು. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಆರ್ಎಸ್ಎಸ್ ಬ್ಯಾನ್ ಮಾಡಲು ಕಾರಣ ಹೇಳಿ: ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬೆಕ್ಕಿನ ಕಣ್ಣಿನಲ್ಲಿ ಇಲಿ ಎಂಬಂತೆ, ಏನೇ ಘಟನೆ ಆದರೂ ಆರ್ಎಸ್ಎಸ್ಗೆ ಲಿಂಕ್ ಮಾಡುತ್ತಾರೆ. ಅವರಿಗೆ ಆರ್ಎಸ್ಎಸ್ ಹೆಸರು ಹೇಳದೆ ಇದ್ದರೆ ರಾಜಕೀಯ ನಡೆಯುವುದಿಲ್ಲ. ಆರ್ಎಸ್ಎಸ್ ಬ್ಯಾನ್ ಮಾಡಲು ಕಾರಣಗಳು ಏನಿವೆ?. ಅವರು ದೇಶಭಕ್ತಿ ಕೆಲಸ ಮಾಡುವುದಕ್ಕೆ ಅವರನ್ನು ಬ್ಯಾನ್ ಮಾಡಬೇಕಾ?. ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುತ್ತಿದ್ದಾರೆ. ದೇಶದ ಸಂಸ್ಕೃತಿ ಹಾಗೂ ಪರಂಪರೆ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ರಾಜಕೀಯವಾಗಿ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ತಿಳಿಸಿದರು.
ಆರ್ಎಸ್ಎಸ್ ದೇಶದ ಅತ್ಯಂತ ಪ್ರಮುಖವಾದ ದೇಶಭಕ್ತಿಯ ಸಂಸ್ಥೆಯಾಗಿದೆ. ಇದು ದೇಶಾಭಿಮಾನ ಮೂಡಿಸುವ ಕೆಲಸ ಮಾಡುತ್ತಿದೆ. ಅದನ್ನು ಬ್ಯಾನ್ ಮಾಡಲು ಹೇಳುವುದು ಅರ್ಥಹೀನ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಲವು ವರ್ಷದಿಂದ ಪಿಎಫ್ಐ ಸಂಘಟನೆ ಈ ತರಹದ ದೇಶದ್ರೋಹ ಚಟುವಟಿಕೆಗಳನ್ನು ಮಾಡುತ್ತಿದ್ದರು. ಹಲವಾರು ರೂಪಾಂತರದ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದರು. ಹಿಂದೆ ಸಿಮಿ ಇತ್ತು. ನಂತರ ಅದು ಕೆಎಫ್ಡಿಯಾಗಿ ಬಳಿಕ ಅದು ಪಿಎಫ್ಐ ಆಗಿ ಬಂದಿದೆ. ಅದು ಮುಖ್ಯವಾಹಿನಿಯಿಂದ ಬಹಳ ದೂರ ಹೋಗಿದೆ. ವಿದೇಶದಿಂದ ಆದೇಶ ಪಡೆದು ಕಾರ್ಯಾಚರಣೆ ನಡೆಸುತ್ತಿದ್ದರು. ಇತ್ತೀಚಿಗಿನ ಅವರ ಚಟುವಟಿಕೆ ಬಹಳ ದಮನಕಾರಿ ಆಗಿತ್ತು. ದೇಶದ ಕಾನೂನು ಸುವ್ಯವಸ್ಥೆ ಕದಡುವ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.
ದೇಶ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ: ಈ ಹಿನ್ನೆಲೆ ಎಲ್ಲಾ ರಾಜಕೀಯ ಪಕ್ಷಗಳು ಬ್ಯಾನ್ಗೆ ಆಗ್ರಹಿಸಿದ್ದವು. ಕೇರಳದ ಸಿಪಿಎಂ ಸೇರಿ ಹಲವಾರು ರಾಜಕೀಯ ಪಕ್ಷಗಳು ಸಂಘಟನೆಯ ಬ್ಯಾನ್ಗೆ ಒತ್ತಾಯಿಸಿದ್ದವು. ಮೊನ್ನೆ ತಾನೇ ಕೇಂದ್ರ ಸರ್ಕಾರ ಪಿಎಫ್ಐ ಮೇಲೆ ಕಾರ್ಯಾಚರಣೆ ಮಾಡಿತ್ತು. ಈಗ ಬ್ಯಾನ್ ಮಾಡಲಾಗಿದೆ. ಇದರಿಂದ ಭಯೋತ್ಪಾದನೆ ಹಾಗೂ ದೇಶ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ ಎಂದರು.
ಕೇಂದ್ರ ಸರ್ಕಾರ ನಿರ್ಧರಿಸಲಿದೆ: ಪಿಎಫ್ಐ ಕಾರ್ಯಕರ್ತರು ಎಸ್ಡಿಪಿಐ ಪಕ್ಷದಲ್ಲಿ ಕೆಲಸ ಮಾಡುವ ಸಾಧ್ಯತೆ ಬಗ್ಗೆಯ ಪ್ರಶ್ನೆಗೆ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ. ಎಸ್ಡಿಪಿಐ ನೋಂದಾಯಿತ ರಾಜಕೀಯ ಪಕ್ಷ. ಅದನ್ನು ಬ್ಯಾನ್ ಮಾಡಲು ಕಾನೂನಿನಲ್ಲಿ ಬೇರೆ ರೀತಿಯ ನಿಯಮಾವಳಿಗಳಿವೆ. ಅಂತ ಪ್ರಸಂಗ ಬಂದಾಗ ಏನು ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸಲಿದೆ ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರವೇ ಹಗರಣಗಳ ಸರ್ಕಾರವಾಗಿತ್ತು: ಅರುಣ್ ಸಿಂಗ್ ವಾಗ್ದಾಳಿ
ರಾಜಕೀಯ ಗಿಮಿಕ್ ಎಂಬ ತನ್ವೀರ್ ಸೇಠ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತನ್ವೀರ್ ಸೇಠ್ ಮೇಲೆ ಕೊಲೆ ಯತ್ನ ಆಗಿತ್ತು. ತನ್ವೀರ್ ಸೇಠ್ ಅವರೇ ಪಿಎಫ್ಐ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದರು. ಈವಾಗ ರಾಜಕಾರಣಕ್ಕಾಗಿ ತಮ್ಮ ಮೇಲೆ ದಾಳಿ ಮಾಡಿದ್ದನ್ನೂ ಮರೆತು, ರಾಜಕೀಯ ಪ್ರೇರಿತ ಅಂದರೆ ಏನು ಹೇಳಲು ಸಾಧ್ಯ? ಎಂದು ಪ್ರಶ್ನಿಸಿದರು.