ಬೆಂಗಳೂರು : 'ಚಿಯರ್ ಫಾರ್ ಇಂಡಿಯಾ' ಧ್ಯೇಯ ವಾಕ್ಯದಡಿ ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ ಸೈಕಲ್ ರ‍್ಯಾಲಿಗೆ ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಚಾಲನೆ ದೊರೆಯಿತು.
ಸೈಕಲ್ ರ‍್ಯಾಲಿಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ವಿಧಾನಸೌಧದಿಂದಲೇ ಆಲ್ ದಿ ಬೆಸ್ಟ್ ಹೇಳಿದರು. ಸೈಕಲ್ ರ‍್ಯಾಲಿಯಲ್ಲಿ 300ಕ್ಕೂ ಅಧಿಕ ಯುವಕ, ಯುವತಿಯರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಸಿಎಂ, ಯುವ ಜನರು ರಾಜ್ಯದ ಭವಿಷ್ಯ. ಇಂದು ದೇಶದಲ್ಲಿ 56 ಸಾವಿರ ಜನರು ಸೈಕ್ಲಿಂಗ್ ಮಾಡುತ್ತಿದ್ದಾರೆ. ಯುವ ಜನರಲ್ಲಿ ಎನರ್ಜಿ ಇರುತ್ತದೆ, ಆದರೆ ಡಿಸಿಪ್ಲಿನ್ ಬೇಕು. ಹೀಗಾಗಿ, ಸೈಕಲ್ ರ‍್ಯಾಲಿ ಆಯೋಜನೆ ಮಾಡಿರುವುದು ಒಳ್ಳೆಯ ವಿಷಯ ಎಂದು ಹೇಳಿದರು.
ಮನುಷ್ಯ ಕೆಲವನ್ನು ಬಹಳ ಸುಲಭವಾಗಿ ರೂಢಿಸಿಕೊಳ್ಳುತ್ತಾನೆ, ಅದರಲ್ಲಿ ಸೈಕ್ಲಿಂಗ್ ಕೂಡ ಒಂದು. ಸೈಕಲ್ ಚಲಾಯಿಸುವುದರಿಂದ ನಮ್ಮ ದೇಹ ಆರೋಗ್ಯವಾಗಿರುತ್ತದೆ. ಪ್ರತಿಯೊಬ್ಬರಿಗೂ ಸೈಕಲ್ ಬಗ್ಗೆ ಒಂದು ರೀತಿಯ ಅಟ್ಯಾಚ್ಮೆಂಟ್ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಮತ್ತು ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಮಾಜಿ ಸಚಿವ ಡಿ.ವಿ ಸದಾನಂದ ಗೌಡ, ಮಾಜಿ ಸಚಿವ ಡಾ.ಕೆ ಸುಧಾಕರ್, ಸಂಸದ ಪಿ.ಸಿ ಮೋಹನ್ ಭಾಗವಹಿಸಿದ್ದರು. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಭಾಗವಹಿಸಿದರು.