ಬೆಂಗಳೂರು: ತಮಿಳುನಾಡಿನ ಕುನೂರಿನ ಸಮೀಪ ಸಂಭವಿಸಿದ ಸೇನಾ ಹೆಲಿಕ್ಯಾಪ್ಟರ್ ದುರಂತದಲ್ಲಿ ಸಿಡಿಎಸ್ ( ಚೀಫ್ ಅಫ್ ಡಿಫೆನ್ಸ್ ಸ್ಟಾಪ್) ಬಿಪಿನ್ ರಾವತ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಸಂತಾಪ ಸೂಚಿಸಿದ್ದಾರೆ.
ದೇಶದ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜನರಲ್ ರಾವತ್, ಅವರ ಪತ್ನಿ ಹಾಗೂ ಇತರ ಸೇನಾ ಸಿಬ್ಬಂದಿ ಸೇನಾ ಹೆಲಿಕ್ಯಾಪ್ಟರ್ ದುರಂತದಲ್ಲಿ ಸಾವನ್ನಪ್ಪಿರುವುದು ಅತ್ಯಂತ ಆಘಾತಕಾರಿ ಹಾಗೂ ದುರದೃಷ್ಟಕರ.
ಭಗವಂತನು ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ಈ ಆಘಾತ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಬಿಎಸ್ವೈ ಸಂತಾಪ: ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 ಅಧಿಕಾರಿಗಳ ದುರಂತ ಸಾವಿನ ಬಗ್ಗೆ ಪದಗಳಲ್ಲಿ ಹೇಳಲಾಗದಷ್ಟು ಆಘಾತ ಮತ್ತು ದುಃಖವಾಗಿದೆ. ಮೃತರ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಗಾಯಗೊಂಡ ಅಧಿಕಾರಿಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಇದೇ ವೇಳೆ, ಸಿಎಂ ಸಚಿವ ಸಂಪುಟ ಸಹೋದ್ಯೋಗಿಗಳು ಮತ್ತು ಬಿಜೆಪಿ ನಾಯಕರು ಕೂಡ ಸಂತಾಪ ಸೂಚಿಸಿದ್ದಾರೆ.
ಹೆಚ್ಡಿಕೆ ಸಂತಾಪ : ಸೇನಾ ಪಡೆಗಳ ಮುಖ್ಯಸ್ಥರಾದ (CDS) ಜ.ಬಿಪಿನ್ ರಾವತ್, ಅವರ ಶ್ರೀಮತಿಯವರು, ಉನ್ನತ ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಊಟಿಯ ಕೂನೂರು ಬಳಿ ದುರಂತಕ್ಕೀಡಾಗಿ ರಾವತ್, ಶ್ರೀಮತಿ ಅವರು ಸೇರಿ ಇನ್ನಿತರ ಉನ್ನತ ಸೇನಾಧಿಕಾರಿಗಳು ಅಸುನೀಗಿರುವುದು ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದೇಶರಕ್ಷಣೆಗೆ ಅನನ್ಯ ಕೊಡುಗೆ ನೀಡಿದ್ದ ಈ ಸೇನಾಧಿಕಾರಿಗಳ ದುರಂತ ಸಾವು ಆಘಾತಕಾರಿ ಎಂದಿದ್ದಾರೆ. ಇಂದು ದೇಶಕ್ಕೆ ಅತ್ಯಂತ ದುಃಖದ ದಿನ. ದುರಂತದಲ್ಲಿ ಜೀವ ಚೆಲ್ಲಿದ ಎಲ್ಲ ಸೇನಾಧಿಕಾರಿಗಳಿಗೆ ನನ್ನ ಪ್ರಣಾಮಗಳು. ಅವರೆಲ್ಲರಿಗೂ ಚಿರಶಾಂತಿ ಸಿಗಲಿ, ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಎಲ್ಲರ ಕುಟುಂಬಗಳಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.