ಬೆಂಗಳೂರು : ಸಂಪುಟ ಸರ್ಕಸ್, ನಾಯಕತ್ವ ಬದಲಾವಣೆ ವದಂತಿ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಜಂಜಾಟ ಬದಿಗಿಟ್ಟು ಉತ್ತರಪ್ರದೇಶ ಪ್ರವಾಸಕ್ಕೆ ಸಿದ್ಧರಾಗಿದ್ದಾರೆ. ಮೇ 13ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾರಣಾಸಿಗೆ ತೆರಳಲಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ಕಾಶಿಗೆ ಪ್ರಯಾಣಿಸಲಿದ್ದಾರೆ.
ವಾರಣಾಸಿಯ ಜಂಗಮವಾಡಿಮಠದಲ್ಲಿ ನಡೆಯಲಿರುವ ಸನಾತನ ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಪೀಠದ ಉತ್ತರಾಧಿಕಾರಿ ಪಟ್ಟಾಭಿಷೇಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಏಪ್ರಿಲ್ 3ರಿಂದ ಮೇ 13ರವರೆಗೆ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯುತ್ತಿದೆ.
ಪಟ್ಟಾಭಿಷೇಕದ ಕಡೆಯ ದಿನವಾದ ಮೇ 13ರಂದು ಪಂಚಪೀಠದ ಜಗದ್ಗುರುಗಳಾದ ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ, ಕಾಶಿ ಶ್ರೀಗಳ ಸಮ್ಮುಖದಲ್ಲಿ ಕಿರೀಟ ಧಾರಣೆ, ಸಿಂಹಾಸನಾರೋಹಣದೊಂದಿಗೆ ಪಟ್ಟಾಭಿಷೇಕ ನೆರವೇರಲಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವರಾದ ಮಾಧುಸ್ವಾಮಿ, ಮುರುಗೇಶ್ ನಿರಾಣಿ, ಸಿಸಿ ಪಾಟೀಲ್, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಭಾಗವಹಿಸುವರು.
ದೆಹಲಿಯತ್ತ ಪಯಣ? : ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಅಂದಿನ ಸಮಾರಂಭದಲ್ಲಿ ಭಾಗವಹಿಸಲಿದ್ದು, ಯುಪಿ ಸಿಎಂ ಜೊತೆ ಬೊಮ್ಮಾಯಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ಉತ್ತರಪ್ರದೇಶ ಪ್ರವಾಸದ ವೇಳೆ ಹೈಕಮಾಂಡ್ ಅನುಮತಿ ಸಿಕ್ಕಲ್ಲಿ ಅಲ್ಲಿಂದಲೇ ದೆಹಲಿಗೆ ತೆರಳುವ ಅಥವಾ ಯುಪಿ ಪ್ರವಾಸಕ್ಕೆ ಮುನ್ನವೇ ಆಹ್ವಾನ ಬಂದಲ್ಲಿ ದೆಹಲಿಗೆ ತೆರಳಿ ಅಲ್ಲಿಂದ ವಾರಣಾಸಿಗೆ ತೆರಳಲು ಸಿಎಂ ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ: ಅಧಿಕಾರಕ್ಕಾಗಿ ಆಪರೇಷನ್ ಕಮಲ ಅನಿವಾರ್ಯವಾಗಿತ್ತು: ಕಟೀಲ್