ಬೆಂಗಳೂರು: ಅನ್ನ ದಾಸೋಹ, ಆಶ್ರಯ ದಾಸೋಹ ಹಾಗೂ ಅಕ್ಷರ ದಾಸೋಹವನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಾಯಕ ರೂಪದಲ್ಲಿ ಮಾಡುತ್ತಿದೆ. ಸಿದ್ದಗಂಗಾ ಮಠದ ಮಾದರಿಯಲ್ಲೇ ತ್ರಿವಿಧ ದಾಸೋಹ ತತ್ತ್ವ ಅನುಸರಿಸಿಕೊಂಡು ಹೋಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತುಮಕೂರಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ದಾಸೋಹ ದಿನಾಚರಣೆ ಮಾಡುತ್ತಿದ್ದೇವೆ, ಸಿದ್ದಗಂಗಾ ಮಠ ದಾಸೋಹದ ದೊಡ್ಡ ಪರಂಪರೆ ಹುಟ್ಟುಹಾಕಿದೆ. ಬಸವೇಶ್ವರ ಅವರ ಮಾರ್ಗದರ್ಶನವನ್ನು ಶಿವಕುಮಾರ ಸ್ವಾಮೀಜಿ ಅವರು ಅಕ್ಷರಶಃ ಪಾಲನೆ ಮಾಡಿಕೊಂಡು ಬಂದಿದ್ದರು. ಮಠದ ಈಗಿನ ಗುರುಗಳು ಅದನ್ನ ಮುಂದುವರೆಸಿದ್ದಾರೆ. ಹಾಗಾಗಿ, ಸಿದ್ದಗಂಗಾ ಮಠದಲ್ಲೇ ದಾಸೋಹ ದಿನಾಚರಣೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ ಎಂದರು.
ನಮ್ಮ ಸರ್ಕಾರವು ಕೂಡ ತ್ರಿವಿಧ ದಾಸೋಹದ ಹೆಜ್ಜೆಯಲ್ಲಿ ಸಾಗುತ್ತಿದೆ. ಪಡಿತರ ಚೀಟಿದಾರರಿಗೆ ಅಕ್ಕಿ ನೀಡುವುದು, ಒಂದು ಕೆ.ಜಿ ಜೋಳವನ್ನೂ ಕೊಡಬೇಕು ಎಂದು ನಿರ್ಧರಿಸಿದ್ದೇವೆ. ವಿದ್ಯಾರ್ಥಿ ವೇತನ ಕೊಟ್ಟು ವಿದ್ಯಾ ದಾಸೋಹ ಮಾಡುತ್ತಿದ್ದೇವೆ.
ನಿನ್ನೆಯಷ್ಟೇ ಕಾರ್ಮಿಕ ಮಕ್ಕಳಿಗೆ ಶಾಲೆಯ ವ್ಯಾಸಂಗದ ಸಲುವಾಗಿ ವಿದ್ಯಾರ್ಥಿ ವೇತನ ಕೊಟ್ಟಿದ್ದೇವೆ, ರೈತರ ಮಕ್ಕಳಿಗೂ ವಿದ್ಯಾ ಸಿರಿ ಯೋಜನೆಯಡಿ ವಿದ್ಯಾರ್ಥಿ ವೇತನ ಕೊಟ್ಟಿದ್ದೇವೆ. ಆ ಮೂಲಕ ಅಕ್ಷರಶಃ ವಿದ್ಯಾ ದಾಸೋಹ ಮಾಡುತ್ತಿದ್ದೇವೆ. ದೊಡ್ಡ ಪ್ರಮಾಣದಲ್ಲಿ ಮನೆಗಳ ನಿರ್ಮಾಣಕ್ಕೆ ಅನುದಾನ ಕೊಡಲಾಗುತ್ತಿದೆ ಎಂದರು.
ಓದಿ: ವೀಕೆಂಡ್ ಕರ್ಫ್ಯೂ ಬೇಕೋ ಬೇಡವೋ ಎಂದು ಕೋವಿಡ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ: ಸಿಎಂ ಬೊಮ್ಮಾಯಿ
ಅನ್ನ ದಾಸೋಹ, ಆಶ್ರಯ ದಾಸೋಹ, ಅಕ್ಷರ ದಾಸೋಹವನ್ನ ಕಾಯಕ ರೂಪದಲ್ಲಿ ನಮ್ಮ ಸರ್ಕಾರ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ಮಕ್ಕಳ ಜೊತೆ ಸಮಯವನ್ನು ಕಳೆಯುತ್ತೇನೆ ಎಂದು ಸಿಎಂ ತಿಳಿಸಿದರು.
ಜಾಹಿರಾತು:-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ