ಬೆಂಗಳೂರು: ನಮ್ಮದು ಸ್ಪಂದನಾಶೀಲ ಸರ್ಕಾರ. ಹಾಗಾಗಿ ನಾವು ಯಾವುದೇ ಸರ್ಪೈಸ್ ಘೋಷಣೆ ಮಾಡುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ಸ್ಪಂದಿಸುತ್ತಾ ಹೋಗುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ. ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅಜೆಂಡಾ ಪ್ರಕಾರ ಚರ್ಚೆ ನಡೆಯಲಿದೆ. ನಂತರ ಇತರ ವಿಷಯಗಳ ಚರ್ಚೆ ವೇಳೆ ಹಲವಾರು ವಿಚಾರಗಳ ಕುರಿತು ಚರ್ಚೆ ಮಾಡುತ್ತೇವೆ. ಕೊರೊನಾ ನಿರ್ವಹಣೆ ಯಾವ ರೀತಿ ಆಗಬೇಕು ಎಂದು ತಜ್ಞರ ಸಮಿತಿಗೆ ವರದಿ ಕೊಡುವಂತೆ ತಿಳಿಸಿದ್ದೇನೆ. ವರದಿ ಬಂದ ತಕ್ಷಣ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.
ಓದಿ: ಬಾಂಗ್ಲಾದಲ್ಲಿ ಮುಸ್ಲಿಂ, ಭಾರತದಲ್ಲಿ ಹಿಂದೂ: 15 ವರ್ಷದ ಹಿಂದೆ ಅಕ್ರಮವಾಗಿ ನುಸುಳಿ ಬಂದಿದ್ದ ಮಹಿಳೆ ಅರೆಸ್ಟ್
ಜನ್ಮದಿನ ಆಚರಣೆ ಮಾಡಿಕೊಳ್ಳಲ್ಲ: ನಾನು ಜನ್ಮದಿನ ಆಚರಣೆ ಮಾಡಿಕೊಳ್ಳುವುದಿಲ್ಲ. ಹಾಗಾಗಿ ನಾಳೆಯೂ ಹುಟ್ಟುಹಬ್ಬದ ಆಚರಣೆ ಮಾಡುವುದಿಲ್ಲ. ನಮ್ಮ ಸರ್ಕಾರಕ್ಕೆ ಆರು ತಿಂಗಳು ಆಗಿರುವುದರ ಬಗ್ಗೆ ಒಂದು ಪುಸ್ತಕವನ್ನು ಬಿಡುಗಡೆ ಮಾಡುತ್ತೇವೆ. ಏನೆಲ್ಲಾ ಕೆಲಸ ಆರು ತಿಂಗಳಲ್ಲಿ ಆಗಿದೆ. ಅವು ಯಾವ ರೀತಿ ಜನೋಪಯೋಗಿ ಆಗಿವೆ ಎನ್ನುವ ಬಗ್ಗೆ ಪಕ್ಷಿನೋಟವನ್ನು ಒಳಗೊಂಡ ಹೊತ್ತಿಗೆಯನ್ನು ಹೊರ ತರಲಿದ್ದೇವೆ ಎಂದರು.
ಜೋಳ ಖರೀದಿ ಬಗ್ಗೆ ಎಲ್ಲ ರೈತರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಬೇಡಿಕೆ ಬಂತು. ಅದಕ್ಕೆ ಅವಕಾಶ ಮಾಡಿ ಆದೇಶ ಹೊರಡಿಸಿದ್ದೇವೆ. ಈಗ ರಾಗಿ ಖರೀದಿ ಮುಂದುವರಿಸಬೇಕು ಎನ್ನುವ ಬೇಡಿಕೆ ಬಂದಿದೆ. ಅದಕ್ಕೆ ಕೂಡ ಸಂಪುಟ ಉಪಸಮಿತಿ ಇದೆ. ಸಭೆಯಲ್ಲಿ ಅನುಮತಿ ಪಡೆದು ರೈತರಿಗೆ ಅನುಕೂಲ ಆಗುವ ರೀತಿ ಮಾಡುತ್ತೇವೆ ಎಂದರು.
ಹೀಗೆ ಯಾವ ಯಾವ ಸಮಸ್ಯೆಗಳು ಬಂದಿವೆಯೋ ಆಗ ನಮ್ಮ ಸರ್ಕಾರ ಸ್ಪಂದನೆ ಮಾಡಿದೆ. ಅದಕ್ಕೆ ಆರು ತಿಂಗಳು, 100 ದಿನ ಎನ್ನುವ ಕಾಲಮಿತಿಯಿಲ್ಲ. ನಿರಂತರವಾಗಿ ಜನರಿಗೆ ಸಹಾಯ ಮಾಡುವ, ಜನಕಲ್ಯಾಣ ಮಾಡುವ ಸರ್ಕಾರ ನಮ್ಮದು ಎಂದು ಸಿಎಂ ಸಮರ್ಥಿಸಿಕೊಂಡರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ