ಬೆಂಗಳೂರು : ಇಂದು ರಾತ್ರಿ ಸಂಪುಟ ರಚನೆ ಕುರಿತು ಅಂತಿಮ ತೀರ್ಮಾನವಾದರೆ ಬುಧವಾರ ಸಂಪುಟ ವಿಸ್ತರಣೆ ಆಗಲಿದೆ. ಸಭೆ ನಾಳೆಗೆ ಮುಂದೂಡಿಕೆಯಾದಲ್ಲಿ ನೂತನ ಸಚಿವರ ಪ್ರಮಾಣವಚನ ಮತ್ತೊಂದು ದಿನ ವಿಳಂಬವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ ಪಕ್ಷದ ಪ್ರಮುಖರು, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಿದ್ದೇವೆ. ಸಭೆ ನಂತರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿ ಮುಂದಿನ ತೀರ್ಮಾನ ಮಾಡಲಾಗುತ್ತದೆ ಎಂದರು.
ರಾಜ್ಯದ ಮಾಜಿ ಸಚಿವರು, ಶಾಸಕರಲ್ಲಿ ಕೆಲವರು ಬಂದಿದ್ದಾರೆ. ಅವರ ಜೊತೆಯೂ ಚರ್ಚಿಸಿದ್ದೇನೆ. ಈಗಿರುವ ರಾಜಕೀಯ ಸನ್ನಿವೇಶದಲ್ಲಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಒಮ್ಮತದ ನಿರ್ಧಾರ ಆಗಬೇಕು ಎನ್ನುವುದು ನಮ್ಮೆಲ್ಲರ ಪ್ರಯತ್ನವಾಗಿದೆ.
ಎಲ್ಲರೂ ಸಚಿವರಾಗಲು ಸಾಧ್ಯವಿಲ್ಲ ಎಂದು ನಮ್ಮೆಲ್ಲ ಶಾಸಕರಿಗೂ ಗೊತ್ತಿದೆ. ಎಲ್ಲ ಪ್ರಾದೇಶಿಕವಾರು ಆದ್ಯತೆ ಕುರಿತು ಚರ್ಚೆಯಾಗಲಿದೆ. ಹಿಂದಿನ ಸಚಿವ ಸಂಪುಟವನ್ನು ಗಮನದಲ್ಲಿಟ್ಟುಕೊಂಡು ಬ್ಯಾಲೆನ್ಸ್ ಮಾಡಿ ಸಂಪುಟ ರಚನೆ ಮಾಡಲಾಗುತ್ತದೆ ಎಂದರು.
ಓದಿ: ಸಂಪುಟ ರಚನೆ ಸರ್ಕಸ್: ದಿಲ್ಲಿಯಲ್ಲಿ ಬಿ ಎಲ್ ಸಂತೋಷ್ ಜೊತೆ ಬೊಮ್ಮಾಯಿ ಮಾತುಕತೆ
ಸಂಪುಟ ರಚನೆ ಕುರಿತು ಪ್ರಮುಖ ಸೂತ್ರದ ಬಗ್ಗೆ ಇಂದು ಸಂಜೆ ಚರ್ಚೆಯಾಗಲಿದೆ. ಸೂತ್ರ ಅಂತಿಮ ಸ್ವರೂಪಕ್ಕೆ ಬರಲಿದೆ. ಎಷ್ಟು ಹಂತದಲ್ಲಿ ಸಂಪುಟ ರಚನೆ, ವಿಸ್ತರಣೆ ಆಗಬೇಕು, ಪ್ರಾದೇಶಿಕವಾರು ಹೇಗೆ ಆದ್ಯತೆ ನೀಡಬೇಕು. ಉಪಮುಖ್ಯಮಂತ್ರಿ ಸ್ಥಾನವೂ ಕೂಡ ಸೂತ್ರದ ಭಾಗವಾಗಿದೆ.
ಮೊದಲಿಗೆ ಪ್ರಮಾಣವಚನ ಸ್ವೀಕಾರ ಮಾಡುವವರ ಸಂಖ್ಯೆ ನಿರ್ಧಾರವಾಗಬೇಕು. ನಂತರ ಹೆಸರುಗಳನ್ನು ಅಂತಿಮಗೊಳಿಸಲಾಗುತ್ತದೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಸಂಪುಟಕ್ಕೆ ಸೇರುವ ವಿಚಾರದಲ್ಲಿಯೂ ಹೈಕಮಾಂಡ್ ಅಂತಿಮಗೊಳಿಸುವ ಪಟ್ಟಿಯಲ್ಲಿಯೇ ಉತ್ತರ ಸಿಗಲಿದೆ ಎಂದರು.
ಓದಿ: ಸಚಿವರ ಪಟ್ಟಿಗೆ ಕೇಂದ್ರ ನಾಯಕರು ಒಪ್ಪಿಗೆ ನೀಡಿದ್ರೆ ಬುಧವಾರ ಸಂಪುಟ ರಚನೆ: ಸಿಎಂ ಬೊಮ್ಮಾಯಿ