ಬೆಂಗಳೂರು: ಡಿಸೆಂಬರ್ 10 ರಂದು ನಡೆಯಲಿರುವ 20 ಸ್ಥಳೀಯ ಸಂಸ್ಥೆಗಳ 25 ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಕುರಿತು ಮಾತುಕತೆ ಮುನ್ನೆಲೆಗೆ ಬಂದಿದೆ. ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಬಿಜೆಪಿ ಹಾಗೂ ಜೆಡಿಎಸ್ನ ಅಗ್ರ ನಾಯಕರಾದ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಮೈತ್ರಿ ಕುರಿತು ಎರಡೂ ಪಕ್ಷಗಳ ನಡುವೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವ ನಡುವೆ ನವದೆಹಲಿಯಲ್ಲಿ ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟೀಕರಣ ನೀಡಿದ್ದಾರೆ. ವಿಧಾನ ಪರಿಷತ್ ಮೈತ್ರಿಯಲ್ಲಿ ಹಲವಾರು ವಿಚಾರಗಳಿವೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಇದರ ಬಗ್ಗೆ ಅಂತಿಮ ತೀರ್ಮಾನ ಮಾಡಲಿದ್ದಾರೆ.
ಹಲವಾರು ಜಿಲ್ಲೆಗಳಲ್ಲಿ ಹಲವಾರು ರೀತಿಯ ಅಭಿಪ್ರಾಯಗಳಿವೆ. ಅವುಗಳನ್ನು ಸಮಗ್ರವಾಗಿ ನೋಡಿ ಕೇಂದ್ರದ ನಾಯಕರ ಜೊತೆ ಮಾತುಕತೆ ನಡೆಸಿ ಯಡಿಯೂರಪ್ಪ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.
ರಾಜ್ಯ ನಾಯಕರೇ ಮೈತ್ರಿ ಬಗ್ಗೆ ನಿರ್ಧಾರ ಕೈಗೊಳ್ತಾರೆ
ನವೆಂಬರ್ 30 ರಂದು ಜೆಡಿಎಸ್ ವರಿಷ್ಠ ಹೆಚ್. ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ್ದ ವೇಳೆ ಪರಿಷತ್ ಚುನಾವಣೆ ಮೈತ್ರಿ ಕುರಿತ ಊಹಾಪೋಹಕ್ಕೆ ರೆಕ್ಕೆ ಪುಕ್ಕ ಬಂದಿದ್ದವು. ರಾಜ್ಯದ ನಾಯಕರೇ ಮೈತ್ರಿ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಪ್ರಧಾನಿ ಮೋದಿಗೆ ದೇವೇಗೌಡರು ತಿಳಿಸಿದ್ದರು ಎನ್ನಲಾಗಿತ್ತು.
ಮೋದಿ ಭೇಟಿ ನಂತರ ಪ್ರತಿಕ್ರಿಯೆ ನೀಡಿದ್ದ ದೇವೇಗೌಡರು, ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಇಲ್ಲದ ಕಡೆ ಬಿಜೆಪಿಗೆ ಬೆಂಬಲ ನೀಡುವ ಕುರಿತು ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ನಿರ್ಧರಿಸಲಿದ್ದಾರೆ ಎನ್ನುವ ಹೇಳಿಕೆ ನೀಡಿದ್ದರು.
ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಕೂಡ ಇತ್ತೀಚೆಗೆ ಬಹಿರಂಗವಾಗಿಯೇ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಜೆಡಿಎಸ್ಗೆ ಮನವಿ ಮಾಡಿದ್ದರು.
2022 ರ ಜನವರಿ 5ಕ್ಕೆ ಅಧಿಕಾರಾವಧಿ ಮುಕ್ತಾಯಗೊಳ್ಳುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10 ರಂದು ಮತದಾನ ನಡೆಯುತ್ತಿದೆ. 14 ರಂದು ಮತಗಳ ಎಣಿಕೆ ನಡೆಯಲಿದೆ. 75 ಸದಸ್ಯ ಬಲದ ವಿಧಾನ ಪರಿಷತ್ನಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿದ್ದರೂ ಅಗತ್ಯ ಬಹುಮತ ಇಲ್ಲದ ಕಾರಣ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ಮೂಲಕ ಪರಿಷತ್ನಲ್ಲಿ ಬಹುಮತಕ್ಕೆ ಬೇಕಿರುವ ಸಂಖ್ಯೆ ಪಡೆಯುವ ಅವಕಾಶ ಬಿಜೆಪಿಗಿದೆ. ಅಲ್ಲದೇ, ಇತ್ತೀಚೆಗೆ ನಡೆದ ಸಿಂಧಗಿ ಮತ್ತು ಹಾನಗಲ್ ಉಪ ಚುನಾವಣೆಯ ಜಿದ್ದಾಜಿದ್ದಿನ ಪೈಪೋಟಿ ನಡುವೆ ಈ ಚುನಾವಣೆ ಬಂದಿದ್ದು, ಕಾಂಗ್ರೆಸ್ ಸೋಲಿಸಲು ಬಿಜೆಪಿ, ಜೆಡಿಎಸ್ ನೆರವು ಪಡೆಯಲು ಮುಂದಾಗಿದೆ.
ಓದಿ: ರಾಜ್ಯದಲ್ಲಿ ಪತ್ತೆಯಾಗಿರುವ ಒಮಿಕ್ರೋನ್ ಸೋಂಕಿತರ ಬಗ್ಗೆ ಮಾಹಿತಿ ನೀಡಿದ ಗೌರವ್ ಗುಪ್ತಾ