ಬೆಂಗಳೂರು: ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಕುರಿತು ಸದನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಎಷ್ಟೇ ಸೈಕಲ್ ಹೊಡೆದ್ರೂ ಏನು ಪ್ರಯೋಜನವಿಲ್ಲ
ವಿಧಾನಸಭಾ ಅಧಿವೇಶನದಲ್ಲಿ ಇಂದು ಸಿಎಂ ಬೆಲೆ ಏರಿಕೆ ಸಂಬಂಧ ಉತ್ತರ ನೀಡುತ್ತಿದ್ದ ವೇಳೆ, ನೀವು ಎಷ್ಟು ಸೈಕಲ್ ಹೊಡೆದ್ರು ಏನೂ ಆಗಲ್ಲ. ಎಷ್ಟು ಚಕ್ಕಡಿ ಹೊಡೆದ್ರೂ ಏನೂ ಪ್ರಯೋಜನವಿಲ್ಲ. ಹಗ್ಗ ಸಿದ್ದರಾಮಣ್ಣನ ಕೈಯಲ್ಲಿ, ಬಾರು ಕೋಲು ಡಿ.ಕೆ. ಶಿವಕುಮಾರ್ ಕೈಯಲ್ಲಿದೆ. ಯಾವಾಗ ಸಿದ್ದರಾಮಣ್ಣ ಹಗ್ಗ ಎಳೆಯುತ್ತಾರೋ, ಆಗ ಶಿವಕುಮಾರ್ ಬಾರುಕೋಲಲ್ಲಿ ಹೊಡೆಯುತ್ತಾರೆ. ಆಗ ಎತ್ತುಗಳು ಒಂದೊಂದು ಕಡೆ ಹೋಗುತ್ತವೆ ಎಂದು ಲೇವಡಿ ಮಾಡಿದರು. ಸಿದ್ದರಾಮಣ್ಣ ಸೈಕಲ್ ಹೊಡೆಯೋದ್ರಲ್ಲಿ ಎಕ್ಸ್ಪರ್ಟ್. ಸಿದ್ದರಾಮಣ್ಣನನ್ನ ಬಿಟ್ಟು ಡಿ.ಕೆ. ಶಿವಕುಮಾರ್ ಮುಂದೆ ಹೋಗ್ತಾರೆ. ಇದು ಮನರಂಜನೆ ಅನ್ನೋದು ಜನರಿಗೂ ಗೊತ್ತಿದೆ ಎಂದು ವಿಪಕ್ಷ ನಾಯಕರ ಕಾಲೆಳೆದರು.
ಸೈಕಲ್ ಇಳಿದ ಮೇಲೆ ಬೆನ್ಜ್ ಕಾರಲ್ಲಿ ಹೋಗ್ತೀರಾ
ಸೈಕಲ್ ಮತ್ತು ಎತ್ತಿನಗಾಡಿ ಇಳಿದ ಮೇಲೆ ಬೆನ್ಜ್ ಕಾರಲ್ಲಿ ಹೋಗ್ತಿರಾ. ಜನರು ಇದನ್ನು ಗಮನಿಸಿದ್ದಾರೆ ಎಂದು ಸಿದ್ದು, ಡಿಕೆಶಿ ವಿರುದ್ಧ ಸಿಎಂ ಹರಿಹಾಯ್ದರು.
ನರೇಂದ್ರ ಮೋದಿ ವಿಚಾರಕ್ಕೆ ಬರುವ ಯಾವ ಕಾಂಗ್ರೆಸ್ ನಾಯಕರು ಇಲ್ಲ ಎಂದು ಸಿಎಂ ಹೇಳಿದಾಗ, ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಸದನದಲ್ಲಿ ಗದ್ದಲ ಉಂಟಾಯಿತು. ನಿಮ್ಮ ನಾಯಕರು ನಮ್ಮ ನಾಯಕರ ಬಗ್ಗೆ ಮಾತಾಡಿದ್ದಕ್ಕೆ ನಾನು ಮಾತಾಡಿದ್ದು. ನಿಮ್ಮ ನೋವಿಗೆ ನಾನು ಸ್ಪಂದಿಸಲು ಆಗಲ್ಲ. ನಮ್ಮನಾಯಕ ಪ್ರಧಾನಿ ನರೇಂದ್ರ ಮೋದಿ ವಿಚಾರಕ್ಕೆ ಬರಲು ನಿಮ್ಮ ನಾಯಕರೂ ಯಾರೂ ಇಲ್ಲ ಎಂದು ಪ್ರತಿಪಕ್ಷ ನಾಯಕರಿಗೆ ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟರು.
ಚೀನಿ ಭಾಯಿ ಭಾಯಿ ಅಂತಿದ್ರಿ
ಚೀನಾದವರ ಹತ್ರ ಚೀನಿ ಭಾಯಿ ಭಾಯಿ ಅಂತೇಳಿ ಭೂಮಿ ಬಿಟ್ಟು ಕೊಟ್ಟಿದ್ದು, ನಿಮ್ಮ ಕಾಲದಲ್ಲಿ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಬಂದ್ಮೇಲೆ ಅವರ ಹುಟ್ಟಡಗಿಸಿದ್ದೇವೆ ಗೊತ್ತಿರಲಿ. ಕೋವಿಡ್ ನಿರ್ವಹಣೆಯಲ್ಲಿ ನಮಗೆ ಮೆಚ್ಚುಗೆ ಸಿಕ್ಕಿದೆ ಎಂದರು. ಇದರ ಮಧ್ಯದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಹೀಗೆ ವಿಡಿಯೋ ಮಾಡ್ಕೊಂಡು ಇರಿ ಎಂದು ಕೂಗಿದರು.
‘ಮೋದಿ ಬಗ್ಗೆ ಮಾತಾಡುವ ಯೋಗ್ಯತೆಯಿಲ್ಲ’
ಇಂದಿರಾಗಾಂಧಿ ಆಡಳಿತವನ್ನು ಟೀಕೆ ಮಾಡಿದ ಸಿಎಂ ಬೊಮ್ಮಾಯಿ, ಮೋದಿ ಬಗ್ಗೆ ಮಾತನಾಡುವ ಯೊಗ್ಯತೆ ನಿಮಗಿಲ್ಲ. ಬಡವರು ಹಸಿವಿನಿಂದ ಒಬ್ಬರೂ ಸಾಯಲಿಲ್ಲ. ಮೋದಿ ಹೊಸ ಹೊಸ ಯೋಜನೆ ತರುವ ಮೂಲಕ ಬಡವರಿಗೆ ಊಟ ನೀಡಿದ್ದಾರೆ. ಕೋವಿಡ್ ನಿರ್ವಹಣೆ ಭಾರತದಲ್ಲಿ ಉತ್ತಮವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಎಲ್ಲರಿಗೂ ಲಸಿಕೆ ನೀಡಿದ್ದೇವೆ ಎಂದು ಸಿಎಂ ಮಾತಿಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಫೋನ್ ಫ್ರೆಂಡ್ಗೆ ಲೋನ್
ಶ್ರೀಮಂತರಿಗೆ ಎಷ್ಟು ಲೋನ್ ಕೊಟ್ಟಿದ್ದಾರೆ ಎಂಬ ಎಂದು ಶಿವಲಿಂಗೇಗೌಡರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಕೌನ್ ಬನೆಗಾ ಕರೋಡ್ ಪತಿ ಎಂಬ ಕಾರ್ಯಕ್ರಮವಿತ್ತು. ಅದಲ್ಲಿ ಫೋನೋ ಫ್ರೆಂಡ್ ಅಂತಾ ಇತ್ತು. ಅದೇ ರೀತಿಯಲ್ಲಿ ಯುಪಿಎ ಅವಧಿಯಲ್ಲಿಯೂ ಫೋನ್ ಫ್ರೆಂಡ್ ಅಂತಾ ಇತ್ತು. ಫೋನ್ ಮಾಡಿದವರಿಗೆ ಲೋನ್ ಸಿಗುತ್ತಿತ್ತು. ಪೋನ್ ಮಾಡಿದವರಿಗೆ ಇಡೀ ಸಂಪತ್ತನ್ನ ಕೊಟ್ಟು ದೇಶ ಅಪಾಯದಲ್ಲಿಟ್ಟಿದ್ರು. ಇವರಿಗೆ ಅಧಿಕಾರ ಸಿಕ್ಕಾಗ ಎಲ್ಲ ಬೆಲೆ ಏರಿಸಿದರು. ಕೋವಿಡ್ ಬಂದಿದ್ದರೆ ನಿಮ್ಮ ಸರ್ಕಾರ ಏನಾದರೂ ಇದ್ದಿದ್ದರೆ ಜನ ರಸ್ತೆಯಲ್ಲಿ ಸಾಯ್ತಿದ್ರು ಎಂದು ವಾಗ್ದಾಳಿ ನಡೆಸಿದರು.
ನೀವು ಮಾಡಿದ್ದ ವೈಫಲ್ಯದಿಂದ ನಮಗೆ ಹೊರೆ
ನೀವು ಇದ್ದಾಗ ಸೇಲ್ ಟ್ಯಾಕ್ಸ್ ಮಾಡಿಲ್ಲ. ಆಯಿಲ್ ಬಾಂಡ್ ತಂದು ಹೊರೆ ಮಾಡಿದ್ದೀರಿ. ಸಬ್ಸಿಡಿ ಕಡಿಮೆ ಮಾಡಿದ್ರಿ. ನೀವು ಮಾಡಿದ್ದ ವೈಫಲ್ಯದಿಂದ ಇವತ್ತು ಹೊರೆ ಆಗುತ್ತಿದೆ. ಬೆಲೆ ಏರಿಕೆ ಬಿಸಿಯನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಂಡಿದೆ. ಬೆಲೆ ಏರಿಕೆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ ಎಂದರು.
ಸಿಎಂ ಉತ್ತರಕ್ಕೆ ಮೇಜು ಕುಟ್ಟಿ ಬಿಜೆಪಿ ಸದಸ್ಯರು ಬೆಂಬಲ ನೀಡಿದರು.
ಕುಮಾರವ್ಯಾಸನ ಪದ್ಯ ಉಲ್ಲೇಖಿಸಿದ ಸಿಎಂ
ರಾಜನು ಯಾವ ರೀತಿ ರಾಜ್ಯವನ್ನಾಳಬೇಕು? ಎಂಬ ಕುಮಾರವ್ಯಾಸನ ಪದ್ಯವನ್ನು ಸದನದಲ್ಲಿ ಸಿಎಂ ಓದಿದರು.
‘ಮಾಲೆಗಾರ ಸಿಳೀಮುಖನ ಪಶು
ಪಾಲಕನವೋಲ್ ಪ್ರಜೆಯ ರಕ್ಷಿಸಿ
ಮೇಲೆ ತೆಗೆವೈ ಧನವನುಳಿದಂಗಾರಕಾರಕನ
ವೋಲು ಕಡದುರು ವ್ಯಾಘ್ರನಂತೆ ವಿ
ತಾಳಿಸಲು ಪ್ರಜೆ ನಸಿಯಲರಸಿನ
ಬಾಳಿಕೆಗೆ ಸಂದೇಹವರಿಯಾ ರಾಯ ಕೇಳೆಂದ"
ತಾತ್ಪರ್ಯ: ರಾಜನಾದವನು ಯಾವ ರೀತಿ ರಾಜ್ಯವನ್ನಾಳಬೇಕೆಂದು ಇಲ್ಲಿ ವಿವರಿಸಲಾಗಿದೆ. ವಿದುರನು ಮೂರು ಉದಾಹರಣೆಯನ್ನು ನೀಡಿ ಧೃತರಾಷ್ಟ್ರನಿಗೆ ತಿಳಿಸುತ್ತಾನೆ. ಯಾವ ರೀತಿ ಹೂವಾಡಿಗನು ಹೂವನ್ನು ಬಿಡಿಸಿ ಗಿಡವನ್ನು ರಕ್ಷಿಸುತ್ತಾನೆ. ದುಂಬಿಯು ಹೂವಿಗೆ ತೊಂದರೆ ಕೊಡದೇ ಹೂವಿನ ರಸವನ್ನು ಮಾತ್ರ ಹೀರುತ್ತದೆ. ಪಶುಪಾಲಕನು ಗೋವನ್ನು ರಕ್ಷಿಸಿ ಅದರಿಂದ ಹಾಲನ್ನು ಮಾತ್ರ ಕರೆದುಕೊಳ್ಳುತ್ತಾನೆ. ಹಾಗೆಯೇ ಪ್ರಜೆಗಳನ್ನು ರಕ್ಷಿಸಿ ತೆರಿಗೆಯನ್ನು ಸಂಗ್ರಹಿಸುವೆಯಾ? ಅಥವಾ ಇದ್ದಿಲು ಮಾರುವವನು ಗಿಡವನ್ನೇ ಕಡಿದು ಸುಡುವಂತೆ, ಕಡಿಜೀರಗೆ ಹುಳುವು ಹೂವನ್ನೇ ಛಿದ್ರಿಸುವಂತೆ, ಹುಲಿಯು ಹಸುವನ್ನೇ ಕೊಲ್ಲುವಂತೆ ಪ್ರಜೆಗಳನ್ನು ನಡೆಸಿಕೊಳ್ಳುವೆಯಾ? ಉತ್ತರಾರ್ಧದಲ್ಲಿ ಹೇಳಿರುವ ರೀತಿ ನೀನು ಪ್ರಜೆಗಳನ್ನು ನಡೆಸಿಕೊಂಡರೆ ಪ್ರಜೆಗಳು ನಶಿಸಿ ಹೋಗಿ ರಾಜನ ಉಳಿವೇ ಸಂಶಯಕ್ಕೆ ಒಳಗಾಗುತ್ತದೆ.
ತಾಳ ಚೆನ್ನಾಗಿ ಹಾಕ್ತೀರಾ
ಓಹ್, ತಾಳ ಚೆನ್ನಾಗಿ ಹಾಕ್ತೀರಾ ಎಂದು ಬೊಮ್ಮಾಯಿಗೆ ಸಿದ್ದರಾಮಯ್ಯ ಲೇವಡಿ ಮಾಡಿದರು. ಎಲ್ಲ ಕಾಲದಲ್ಲಿ ಬೆಲೆ ಏರಿಕೆ ಆಗಿದೆ. ನಿಮ್ಮ ಕಾಲದಲ್ಲೂ ಆಗಿತ್ತು. ನಮ್ಮ ಕಾಲದಲ್ಲೂ ಆಗಿತ್ತು ಅಂತಾ ಸಿಎಂ ಹೇಳಿದ್ದಾರೆ. ಆದರೆ, ಇವತ್ತು ಜನರ ಜೀವನ ಏನಾಗಿದೆ?. ನಿತ್ಯ ಬಳಕೆ ಪದಾರ್ಥಗಳು, ಗೃಹ ನಿರ್ಮಾಣ ವಸ್ತುಗಳ ದರ ಗಗನಕ್ಕೇರಿದೆ. ಕಚ್ಚಾ ತೈಲದ ದರ ಇಳಿದರೂ ಇಂಧನ ದರ ಇಳಿಸಲಿಲ್ಲ. ಸುಂಕವನ್ನೂ ಕಡಿಮೆ ಮಾಡಲಿಲ್ಲ. ಎಲ್ಲಕ್ಕೂ ಹಿಂದಿನ ಸರ್ಕಾರ ತಪ್ಪು ಮಾಡಿತ್ತು ಅಂತಾ ಸಮರ್ಥನೆ ಮಾಡಿಕೊಳ್ಳುತ್ತಾರೆ. ಹಿಂದಿನ ಸಲ ಇವರೇ ಇದ್ದರಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.
ಜನರಿಗಾಗಿ ಕೇಂದ್ರ ಸರ್ಕಾರ ಏನು ಮಾಡಿದೆ?
ಪ್ರಧಾನಿ ಹತ್ತಿರಕ್ಕೂ ಕಾಂಗ್ರೆಸ್ ನಾಯಕರು ಹೋಗೋಕೆ ಆಗಲ್ಲ ಅನ್ನೋ ವಿಚಾರಕ್ಕೆ ಮಾತನಾಡಿದ ಸಿದ್ದರಾಮಯ್ಯ, ಮೋದಿ ಹತ್ತಿರ ನಾವ್ಯಾಕೆ ಹೋಗೋಣ. ಜನರು ವೋಟ್ ಹಾಕಿದ್ದಾರೆ. ಮೋದಿ ಎರಡೆರಡು ಸಲ ಪ್ರಧಾನ ಮಂತ್ರಿ ಆಗಿದ್ದಾರೆ. ಆದರೆ ಜನರಿಗಾಗಿ ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರು.
ಬೊಮ್ಮಾಯಿ ಹೊಗಳಿದ್ದು ನಿಮ್ಮ ದೊಡ್ಡತನ
ಸಿಎಂ ಉತ್ತರ ಬಳಿಕ ಸ್ಪಷ್ಟನೆ ಕೇಳಲು ಎದ್ದ ಸಿದ್ದರಾಮಯ್ಯ, ನಾನು ಬೆಲೆ ಏರಿಕೆ ಬಗ್ಗೆ ಸದನದಲ್ಲಿ ಭಾಷಣ ಮಾಡಲಿಲ್ಲ. ನಮ್ಮಿಬ್ಬರ ಮಾತುಗಳನ್ನೂ ಜನ ಕೇಳಿದ್ದಾರೆ. ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದು ಯಡಿಯೂರಪ್ಪ. ನೀವೂ ಸಿಎಂ ಇದ್ದಾಗ ಒಳ್ಳೇ ಭಾಷಣ ಮಾಡಿದ್ರಿ. ಆಗ ಯಾರಾದರೂ ನಿಮ್ಮನ್ನು ಹೊಗಳಿದ್ರಾ. ನೀವು ಬೊಮ್ಮಾಯಿಯವರನ್ನು ಹೊಗಳಿದ್ದು ನಿಮ್ಮ ದೊಡ್ಡತನ ಎಂದು ಸಿದ್ದರಾಮಯ್ಯ ಯಡಿಯೂರಪ್ಪ ಅವರನ್ನು ಕಾಲೆಳೆದರು.
ಸ್ಪರ್ಧೆಯ ನಡುವೆಯೂ ಬೊಮ್ಮಾಯಿ ಸಿಎಂ
ಸಿಎಂ ಸ್ಥಾನಕ್ಕೆ ಅಷ್ಟೆಲ್ಲ ಸ್ಪರ್ಧೆಯಿದ್ದರೂ, ಬೊಮ್ಮಾಯಿಯವರನ್ನು ಈ ಸ್ಥಾನದಲ್ಲಿ ಕೂರಿಸಿದ್ದೀರಿ. ನಿಮ್ಮನ್ನು ಅಭಿನಂದಿಸಬೇಕು. ಮುಂದೆ ಎಲ್ಲ ತೆರೆ ಮೇಲೆ ನೋಡೋಣ ಎಂದು ಯಡಿಯೂರಪ್ಪಗೆ ರಮೇಶ್ ಕುಮಾರ್ ಕುಹುಕವಾಡಿದರು. ಆಗ ಮಧ್ಯ ಪ್ರವೇಶಿಸಿದ ಸಿಎಂ, ಎಲ್ಲರನ್ನೂ ಜನತೆ ತೆರೆಯ ಮೇಲೆ ನೋಡ್ತಾರೆ ಎಂದು ತಿರುಗೇಟು ನೀಡಿದರು.
ಸುಧಾಕರ್ - ರಮೇಶ್ ಕುಮಾರ್, ಸಿಎಂ - ಸಿದ್ದು ನಡುವೆ ವಾಗ್ವಾದ
ಸಚಿವ ಡಾ.ಸುಧಾಕರ್ ಅವರಿಂದ ಸರಿಯಾದ ತರಬೇತಿ ಪಡೆದಿದ್ದೀರಾ ಎಂದು ಸಿದ್ದರಾಮಯ್ಯನವರು ಸಿಎಂ ಬೊಮ್ಮಾಯಿ ಅವರನ್ನು ಕೆಣಕಿದರು. ಆಗ ಸಿಎಂ, ನೀವು ರಮೇಶ್ ಕುಮಾರ್ ಅವರಿಂದ ಸಲಹೆ ಪಡೆದಿದ್ದೀರಾ ಅಂದರು. ಸಿಎಂ ಮಾತಿಗೆ ಎದ್ದು ನಿಂತ ರಮೇಶ್ ಕುಮಾರ್, ನಾನು ಎಲ್ಲರಿಗೂ ಸಲಹೆ ನೀಡಿದ್ದೇನೆ. ಆ ಕಡೆ ಇದ್ದಾಗ ಸಲಹೆ ನೀಡಿದ್ದೇನೆ ಎಂದರು.
ಇದಕ್ಕೆ ತಿರುಗೇಟು ನೀಡಿದ ಸಚಿವ ಸುಧಾಕರ್, ದೇವೇಗೌಡರ ಕಾಲದಲ್ಲಿ ಬ್ಯಾಂಡ್ ಸೆಟ್ ಹೇಗಿತ್ತು ಅಂತಾ ಗೊತ್ತಿದೆ ಎಂದರು. ಆಗ ಸುಧಾಕರ್ ಮತ್ತು ರಮೇಶ್ ಕುಮಾರ್ ನಡುವೆ ವಾಗ್ವಾದ ಉಂಟಾಯಿತು.
ಮೋದಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆಕ್ಷೇಪ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ಅವರು ಬಳಸಿದ ಆಕ್ಷೇಪಾರ್ಹ ಪದ ಬಳಕೆಯನ್ನು ಕಡತದಿಂದ ತೆಗೆಯಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ಸದಸ್ಯರು ಸ್ಪೀಕರ್ಗೆ ಮನವಿ ಮಾಡಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ 'ಗದುಗಿನ ನಾರಾಯಣಪ್ಪ': ಆಗ ಸಿದ್ದರಾಮಯ್ಯ, ಈಗ ಬೊಮ್ಮಾಯಿ..!