ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ರಾಜ್ಯದ ನ್ಯಾಯಾಂಗ ವಿಷಯಗಳ ಕುರಿತು ಉನ್ನತ ಮಟ್ಟದ ಸಮಾಲೋಚನಾ ಸಭೆ ನಡೆಸಿದರು.
ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕಾ, ಹೈಕೋರ್ಟ್ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ, ಬಿ ವಿ ನಾಗರತ್ನಾ, ಅರವಿಂದ ಕುಮಾರ್, ಅಲೋಕ್ ಆರಾಧ್ಯ, ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರ ಗೌಡ, ರಾಜ್ಯದ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಸಭೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ನಡೆಸಬೇಕಾದ ಕಾನೂನು ಹೋರಾಟಗಳು ಹಾಗೂ ಅದಕ್ಕೆ ಅಗತ್ಯವಿರುವ ಮಾಹಿತಿ ಮತ್ತು ದಾಖಲೆಗಳ ವಿಚಾರವಾಗಿ ಸಿಎಂ ಈ ಸಂದರ್ಭ ಚರ್ಚೆ ನಡೆಸಿದ್ದಾರೆ. ಗಡಿ ಸಮಸ್ಯೆಗಳು, ಮಹದಾಯಿ ಯೋಜನೆ ಜಾರಿ, ರಾಜ್ಯ ಸರ್ಕಾರದ ವಿವಿಧ ರಾಜ್ಯಗಳು ಸೇರಿದಂತೆ ವಿವಿಧ ವಿಚಾರವಾಗಿ ಸೆಪ್ಟೆಂಬರ್ 13ರಿಂದ ಆರಂಭವಾಗುವ ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ಈ ಹಿನ್ನೆಲೆ ಪ್ರತಿಪಕ್ಷಗಳಿಗೆ ಸಮರ್ಥ ಪ್ರತಿಕ್ರಿಯೆಯನ್ನು ದಾಖಲೆ ಸಮೇತ ಒದಗಿಸುವ ಉದ್ದೇಶದಿಂದ ವಿಷಯ ಸಂಗ್ರಹಣೆಗೆ ಸಿಎಂ ಈ ಸಭೆ ನಡೆಸಿದರು.
ರಾಜ್ಯ ಸರ್ಕಾರ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮತ್ತು ಹಸಿರು ನ್ಯಾಯಾಧಿಕರಣದಲ್ಲಿ ಎದುರಿಸುತ್ತಿರುವ ವಿವಿಧ ವಿಚಾರಣೆಗಳ ಸದ್ಯದ ಸ್ಥಿತಿ ಹೇಗಿದೆ ಎಂಬ ಮಾಹಿತಿಯನ್ನು ಸಿಎಂ ಪಡೆದುಕೊಂಡಿದ್ದಾರೆ. ಅತ್ಯಂತ ಪ್ರಮುಖವಾಗಿ ಮುಂದಿನ ಕೆಲ ದಿನಗಳಲ್ಲಿ ವಿಚಾರಣೆಗೆ ಬರುವ ವಿವಿಧ ಪ್ರಕರಣಗಳ ಕುರಿತಾದ ಕೂಲಂಕಷ ಮಾಹಿತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ನನ್ನ ತಾಯಿಗೂ ಮಾರಕ ಕ್ಯಾನ್ಸರ್ ಇತ್ತು.. ಆದರೆ, ಆಗ ಟೆಕ್ನಾಲಜಿ ಇರಲಿಲ್ಲ.. ಸಿಎಂ ಬಸವರಾಜ ಬೊಮ್ಮಾಯಿ
ಇಂದು ಬೆಳಗ್ಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕಾರ್ಯಕ್ರಮ, ಕಿದ್ವಾಯಿ ಆಸ್ಪತ್ರೆಯ ಒಪಿಡಿ ವಾರ್ಡ್ ಉದ್ಘಾಟನೆ, ವಿಧಾನಸೌಧದ ಮುಂಭಾಗ ಲೈನ್ಸ್ ಸಂಸ್ಥೆಯ ಸಂಚಾರಿ ರಕ್ತದಾನ ವಾಹನಕ್ಕೆ ಚಾಲನೆ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಸಿಎಂ ಸಂಜೆಯ ನಂತರ ಕುಮಾರಕೃಪ ಅತಿಥಿಗೃಹಕ್ಕೆ ಆಗಮಿಸಿ ಅಲ್ಲಿ ಕಾನೂನು ಇಲಾಖೆಯ ಅಧಿಕಾರಿಗಳ ಹಾಗೂ ತಜ್ಞರ ಜೊತೆ ಸಭೆ ನಡೆಸಿದ್ದಾರೆ.