ದೇವನಹಳ್ಳಿ (ಬೆಂಗಳೂರು): ದಾವೋಸ್ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇಂಧನ ಸಚಿವ ಸುನಿಲ್ ಕುಮಾರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ ರೆಡ್ಡಿ ಹಾಗು ಗುಪ್ತಚರ ಇಲಾಖೆ ಎಡಿಜಿಪಿ ದಯಾನಂದ ಸಿಎಂ ಅವರನ್ನು ಬರಮಾಡಿಕೊಂಡರು. ಮೇ 22 ರಂದು ಸಿಎಂ ಬೊಮ್ಮಾಯಿ, ಸಚಿವರಾದ ಮುರುಗೇಶ್ ನಿರಾಣಿ, ಡಾ.ಅಶ್ವಥ್ ನಾರಾಯಣ್ ವಿವಿಧ ಅಧಿಕಾರಿಗಳ ತಂಡದ ಜೊತೆ ದಾವೋಸ್ ಪ್ರವಾಸ ಕೈಗೊಂಡಿದ್ದರು.
ಬೊಮ್ಮಾಯಿ ಸಮ್ಮುಖದಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ರೆನ್ಯೂ ಪವರ್ ಪ್ರೈ.ಲಿ. ಕಂಪನಿಯು ರಾಜ್ಯ ಸರ್ಕಾರದೊಂದಿಗೆ 50,000 ಕೋಟಿ ರೂ. ಹೂಡಿಕೆಯ ಒಪ್ಪಂದಕ್ಕೆ ಸಹಿ ಮಾಡಿತು. ಈ ಕಂಪನಿಯು ಮುಂದಿನ 7 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ, ಬ್ಯಾಟರಿ ಸ್ಟೋರೇಜ್, ಗ್ರೀನ್ ಹೈಡ್ರೋಜನ್ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ.
ಇನ್ನು ಅರ್ಸೆಲರ್ ಮಿತ್ತಲ್ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷ ಲಕ್ಷ್ಮಿ ಎನ್. ಮಿತ್ತಲ್ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಮಾತನಾಡಿದರು. ಹನಿವೇಲ್ ಕಂಪೆನಿಯ ಉಪಾಧ್ಯಕ್ಷೆ ಅಮಿ ಚಿಯಾಂಗ್ ಸಹ ಬಂಡವಾಳ ಹೂಡಿಕೆ ಕುರಿತು ಬೊಮ್ಮಾಯಿ ಜೊತೆ ಮಾತುಕತೆ ನಡೆಸಿದರು.
ದಾವೋಸ್ ವಿಶ್ವ ಆರ್ಥಿಕ ಶೃಂಗ ಸಭೆಯಿಂದ ರಾಜ್ಯಕ್ಕೆ ಹರಿದು ಬಂದ ಬಂಡವಾಳ ಕುರಿತು ಇಂದು ಮಧ್ಯಾಹ್ನ 12:30ಕ್ಕೆ ವಿಧಾನಸೌಧದ ಸಮ್ಮೇಳನದ ಸಂಭಾಗಣದಲ್ಲಿ ಸಿಎಂ ಮಾಧ್ಯಮಗೋಷ್ಠಿ ನಡೆಸಲಿದ್ದಾರೆ.