ಬೆಂಗಳೂರು: ಜೆಡಿಎಸ್ ಸದಸ್ಯರ ಬೇಡಿಕೆಗೆ ಕಡೆಗೂ ಮಣಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನರ್ಸಿಂಗ್ ಕಾಲೇಜು ಪರವಾನಗಿ ಅಕ್ರಮ ಆರೋಪ ಪ್ರಕರಣದ ಕುರಿತು ಜಂಟಿ ಸದನ ಸಮಿತಿ ರಚಿಸಲು ಒಪ್ಪಿಗೆ ಸೂಚಿಸಿದರು. ಆ ಮೂಲಕ ಸದನದಲ್ಲಿ ಮೂರು ದಿನದಿಂದ ನಡೆಯುತ್ತಿದ್ದ ಜೆಡಿಎಸ್ ಧರಣಿ ಅಂತ್ಯಗೊಂಡಿತು.
ಕಳೆದ ಎರಡು ದಿನಗಳಿಂದ ಸದನದ ಬಾವಿಯಲ್ಲಿ ಜೆಡಿಎಸ್ ಧರಣಿ ನಡೆಸುತ್ತಿದ್ದು ಮೂರನೇ ದಿನವೂ ಧರಣಿ ಮುಂದುವರೆಸಿತು. ಮೂರೂ ಪಕ್ಷಗಳ ನಾಯಕರೊಂದಿಗೆ ಸಂಧಾನ ಸಭೆ ನಡೆಸಿದ ಸಭಾಪತಿ ಬಸವರಾಜ ಹೊರಟ್ಟಿ ಸಂಧಾನ ಸಫಲ ಮಾಡುವಲ್ಲಿ ಯಶಸ್ವಿಯಾದರು.
ಸಂಧಾನ ಸಭೆ ನಂತರ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಬಿಜೆಪಿ ಸದಸ್ಯ ರವಿಕುಮಾರ್, 700 ಕ್ಕೂ ಹೆಚ್ಚು ನರ್ಸಿಂಗ್, ಪ್ಯಾರಾಮೆಡಿಕಲ್ ಕಾಲೇಜುಗಳಿವೆ. ಎಲ್ಲಾ ಕಾಲೇಜುಗಳ ಗುಣಮಟ್ಟದ ಕುರಿತು ತನಿಖೆಯಾಗಬೇಕು. ನರ್ಸಿಂಗ್ ಕ್ಷೇತ್ರದಲ್ಲಿನ ಕೊಳೆಯನ್ನು ತೊಳೆದುಹಾಕಬೇಕು. ಹಾಗಾಗಿ ಸದನ ಸಮಿತಿ ರಚಿಸಿ ಎನ್ನುವ ಜೆಡಿಎಸ್ ನಿಲುವಿಗೆ ಸಹಮತ ವ್ಯಕ್ತಪಡಿಸುತ್ತಿದ್ದೇನೆ. ಸದನ ಸಮಿತಿ ರಚಿಸುವಂತೆ ವಿನಂತಿಸುತ್ತೇನೆ ಎಂದರು.
ಇದನ್ನು ಓದಿ: ನರ್ಸಿಂಗ್ ಕಾಲೇಜು ಪರವಾನಗಿ ಹಗರಣ ಪ್ರಕರಣ: ಸದನ ಸಮಿತಿಗೆ ಸಿಎಂ ನಕಾರ
ಸದನಕ್ಕೆ ಸರ್ಕಾರದ ನಿರ್ಧಾರ ತಿಳಿಸಿದ ಸಿಎಂ ಯಡಿಯೂರಪ್ಪ, ನಾವು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಲು ಮುಂದಾಗಿದ್ದೆವು. ಆದರೆ ಸದನ ಸಮಿತಿಗೆ ಜೆಡಿಎಸ್ ಪಟ್ಟು ಹಿಡಿಯಿತು. ನಾವು ಸರಿ ಇದ್ದಾಗ ಹೆದರುವುಲ್ಲ ಬೆದರುವುದಿಲ್ಲ. ಎಲ್ಲಾ ಕಾಲೇಜುಗಳ ಗುಣಮಟ್ಟದ ಕುರಿತು ಜಂಟಿ ಸದನ ಸಮಿತಿ ರಚನೆ ಮಾಡುವುದಾಗಿ ಸಿಎಂ ಯಡಿಯೂರಪ್ಪ ಪ್ರಕಟಿಸಿದರು.
ಸಿಎಂ ನಿರ್ಧಾರವನ್ನು ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸ್ವಾಗತಿಸಿದರು. ಜಂಟಿ ಸದನ ಸಮಿತಿಗೆ ಪರಿಷತ್ ಸದಸ್ಯರನ್ನೇ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ನಿಯಮಾವಳಿಯಂತೆ ಕ್ರಮ ಕೈಗೊಳ್ಳುವುದಾಗಿ ಸಭಾಪತಿ ಭರವಸೆ ನೀಡಿದರು.