ಬೆಂಗಳೂರು: ಒಂದೂವರೆ ವರ್ಷಗಳ ಹಿಂದೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು ಮನೆಗೆಲಸ ಮಾಡುತ್ತಿದ್ದ ಮಹಿಳಾ ಆರೋಪಿಯನ್ನು ಬಂಧಿಸಿದ್ದಾರೆ. ಹಲವು ಬಾರಿ ನೋಟೀಸ್ ನೀಡಿ ಸುಳ್ಳು ಪತ್ತೆ ಪರೀಕ್ಷೆಗೆ (ಪಾಲಿಗ್ರಪಿ) ಒಳಪಡಿಸಿದರೂ ಗುಟ್ಟು ಬಿಟ್ಟುಕೊಡದ ಕಿಲಾಡಿ ಮಹಿಳಾ ಆರೋಪಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾಳೆ. ಪರೀಕ್ಷೆ ವೇಳೆ ನೀಡಿದ ಸುಳಿವು ಆಧರಿಸಿ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗದಗ ಜಿಲ್ಲೆಯ ಜನತಾ ಕಾಲೊನಿಯ ನಿವಾಸಿ ಅನ್ನಪೂರ್ಣ ಬಂಧಿತ ಆರೋಪಿ. ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಉದ್ಯಮಿ ಹೊನ್ನಾಚಾರಿ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. 2021 ರಿಂದ 2022 ಜನವರಿಗೂ ಕೆಲಸ ಮಾಡಿದ್ದಳು. ಈ ಅವಧಿಯಲ್ಲಿ ಹಂತ-ಹಂತವಾಗಿ 10 ಲಕ್ಷ ರೂ ಮೌಲ್ಯದ 250 ಗ್ರಾಂ ಚಿನ್ನಾಭರಣ ಮನೆಯಲ್ಲಿ ಕಳವು ಆಗಿತ್ತು. ಮನೆ ಕೆಲಸದಾಕೆ ಮೇಲೆ ಅನುಮಾನಗೊಂಡು ಆಕೆಯ ವಿರುದ್ಧ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ದೆಸೆಯಿಂದ ನಾಲ್ಕು ಬಾರಿ ನೋಟೀಸ್ ಕೊಟ್ಟು ವಿಚಾರಣೆ ನಡೆಸಿದರೂ, ಆರೋಪಿ ಮಹಿಳೆ ತಾನು ಚಿನ್ನ ಕದ್ದಿಲ್ಲ ಎಂದೇ ಪೊಲೀಸರ ಮುಂದೆ ಪ್ರತಿಪಾದಿಸಿದ್ದಳು.
ಎಲ್ಲ ಆಯಾಮಗಳಿಂದ ತನಿಖೆ ನಡೆಸಿ, ಮಹಿಳೆ ಎಷ್ಟು ತಾನು ಕದ್ದಿಲ್ಲ ಎಂದರೂ ಪೊಲೀಸರು ಮಹಿಳೆಯೇ ಕೃತ್ಯ ಎಸಗಿದ್ದಾರೆ ಎಂದು ಬಲವಾಗಿ ಶಂಕಿಸಿದ್ದರು. ಸಾಕ್ಷ್ಯಕ್ಕಾಗಿ ಶೋಧ ನಡೆಸಿದರೂ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕಬ್ಬಿಣ್ಣದ ಕಡಲೆಯಂತಿದ್ದ ಪ್ರಕರಣ ಭೇದಿಸಲು ಪಣತೊಟ್ಟ ಪೊಲೀಸರು ನ್ಯಾಯಾಲಯದಿಂದ ಅನುಮತಿ ಪಡೆದು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್ಎಸ್ಎಲ್) ಅನ್ನಪೂರ್ಣಳ ಒಪ್ಪಿಗೆ ಪಡೆದೇ ಆಕೆಯಲ್ಲಿ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆ ನಡೆಸಿದರೂ ಮಹಿಳೆ ಕೃತ್ಯದ ಬಗ್ಗೆ ಒಂಚೂರು ಬಾಯಿ ಬಿಟ್ಟಿರಲಿಲ್ಲ.
''ಮಾಮಾ'' ಪದ ನೀಡಿದ ಸುಳಿವು ಆರೋಪಿ ಮುಳುವು: ಪಾಲಿಗ್ರಪಿ ಪರೀಕ್ಷೆ ನಡೆಸಿ ವಿಫಲವಾದರೂ ಕಂಗೆಡದೇ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲು ತೀರ್ಮಾನಿಸಿದ ಪೊಲೀಸರು ನ್ಯಾಯಾಲಯದಿಂದ ಅನುಮತಿ ಪಡೆದು ಅನ್ನಪೂರ್ಣಳನ್ನ ಪರೀಕ್ಷೆಗೆ ಒಳಪಡಿಸಿದರು. ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ಮಹಿಳೆ ಮಾಮಾ.. ಮಾಮ ಎಂದಷ್ಟೇ ಉತ್ತರಿಸಿದ್ದಳು. ಪರೀಕ್ಷೆ ವೇಳೆ ದೊರೆತ ಈ ಸುಳಿವು ಆಧರಿಸಿ ತನಿಖೆ ಚುರುಕುಗೊಳಿಸಿದ ಪೊಲೀಸರು ಮತ್ತೆ ವಿಚಾರಣೆಗೊಳಪಡಿಸಿದಾಗ ಉದ್ಯಮಿ ಮನೆಯಲ್ಲಿ ಕದ್ದಿದ್ದ ಆಭರಣವನ್ನು ಗದಗದಲ್ಲಿರುವ ತನ್ನ ಮಾಮನಿಗೆ ಕೊಟ್ಟಿದ್ದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಳು. ಈ ಹೇಳಿಕೆ ಆಧರಿಸಿ ಮಹಿಳೆಯ ಊರಿನಲ್ಲಿರುವ ಸಂಬಂಧಿ ಮಾವನಿಗೆ ಕೊಟ್ಟಿದ್ದ ಹಾಗೂ ಗಿರವಿ ಅಂಗಡಿಗಳಲ್ಲಿ ಇಟ್ಟಿದ್ದ 100 ಗ್ರಾಂಗೂ ಹೆಚ್ಚಿನ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಸದ್ಯ ಆರೋಪಿ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶೀಘ್ರದಲ್ಲಿ ಚಾರ್ಚ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಗಂಡನ ಹತ್ಯೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ: ಪತ್ನಿಯ ಕಳ್ಳಾಟ ಬಯಲಿಗೆಳೆದ ಪೊಲೀಸರು!