ಬೆಂಗಳೂರು: ಬಟ್ಟೆ ವ್ಯಾಪಾರಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಉತ್ತರ ವಿಭಾಗದ ರಾಜಾಜಿನಗರ ಪೊಲೀಸರು ಆರೋಪಿಯಿಂದ ಕೆಲ ರೋಚಕ ಮಾಹಿತಿಗಳನ್ನು ಪಡೆದಿದ್ದಾರೆ.
ಬಟ್ಟೆ ವ್ಯಾಪಾರಿಯ ಕೊಲೆಗೆ ಪ್ರಕರಣದಲ್ಲಿ ಆರೋಪಿಯಾದ ಪ್ರವೀಣ್ ಹಾಗೂ ವ್ಯಾಪಾರಿಯ ಮಗಳು ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಜೈಕುಮಾರ್ ಅವರ ವ್ಯಾಪಾರ ಚೆನ್ನಾಗಿದ್ದ ಕಾರಣ ಕುಟುಂಬದವರನ್ನು ಜನರು ರಾಯಲ್ ಆಗೇ ನೋಡುತ್ತಿದ್ದರು.
ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ ಪ್ರವೀಣ್ ಹಾಗೂ ಜೈಕುಮಾರ್ ಅವರ ಮಗಳು ಮೋಜು ಮಸ್ತಿಯಲ್ಲೇ ಕಾಲಕಳೆಯುತ್ತಿದ್ದರು. ಅಪ್ಪನ ಜೇಬಿನಿಂದ ಹಣ ಕದ್ದು ಅದರಲ್ಲಿ ಪ್ರಿಯಕರನೊಂದಿಗೆ ಶೋಕಿ ಜೀವನ ನಡೆಸುತ್ತಿದ್ದ ಅಪ್ರಾಪ್ತೆ, ಪ್ರವೀಣ್ನೊಂದಿಗೆ ಮಡಿಕೇರಿ, ಮುಂಬೈನ ಲಾಡ್ಜ್ಗಳಲ್ಲಿ ಇಬ್ಬರೂ ತಂಗುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಈ ವಿಚಾರ ಜೈಕುಮಾರ್ ಅವರಿಗೆ ತಿಳಿದು ಮಗಳಿಗೆ ಹಲವು ಬಾರಿ ಬುದ್ಧಿ ಹೇಳಿದ್ದರು ಎನ್ನಲಾಗಿದೆ.
ಕೊನೆಗೆ ಬಟ್ಟೆ ವ್ಯಾಪಾರಿ ಜೈಕುಮಾರ್ ಅವರನ್ನು ಅಪ್ರಾಪ್ತೆ ಮಗಳು ಹಾಗೂ ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ.
ಅಪ್ರಾಪ್ತೆಗೆ ಕೌನ್ಸೆಲಿಂಗ್: ಮಾದಕ ದ್ರವ್ಯಗಳಿಗೆ ವ್ಯಸನಿಯಾಗಿರುವ ಅಪ್ರಾಪ್ತೆಗೆ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಕೌನ್ಸೆಲಿಂಗ್ ಮಾಡಲಾಗುತ್ತಿದೆ.
ಆರೋಪಿ ತಂದೆ, ಅಪ್ರಾಪ್ತೆ ತಾಯಿ ಕಂಗಾಲು: ಇನ್ನು ಆರೋಪಿ ಪ್ರವೀಣ್ ಮಧ್ಯಮ ವರ್ಗದ ಕುಟುಂಬದವನಾಗಿದ್ದು, ಪ್ರಕಾಶ್ ಒಬ್ಬನೇ ಮಗ. ಒಬ್ಬನೇ ಮಗನಾಗಿದ್ದರೂ ಕೂಡ ತಂದೆ ತಾಯಿ ಕಷ್ಟ ಪಟ್ಟು ಮಗನಿಗೆ ಬಿಕಾಂ ಓದಿಸಿದ್ದರು. ಆದರೆ ಮಗ ಇದೀಗ ಈ ರೀತಿಯಾಗಿ ಯಡವಟ್ಟು ಮಾಡಿಕೊಂಡಿದ್ದು, ಒಂದು ಜೀವವನ್ನೇ ಬಲಿ ಪಡೆದಿರುವ ಕಾರಣ ಪೋಷಕರು ಕಂಗಾಲಾಗಿದ್ದಾರೆ.
ಹಾಗೆ ಅಪ್ರಾಪ್ತ ಬಾಲಕಿಯ ತಾಯಿ ಕೂಡ ಮಗಳ ಈ ಕೃತ್ಯದಿಂದ ಕುಗ್ಗಿಹೋಗಿದ್ದಾರೆ ಎಂದು ತಿಳಿದುಬಂದಿದೆ. ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಲಾಗಿದೆ.