ಬೆಂಗಳೂರು : ರಾಜ್ಯ ಸರ್ಕಾರ ಬಿಬಿಎಂಪಿಯ ಬಜೆಟ್ ತಡೆಹಿಡಿದಿರುವ ಬಗ್ಗೆ, ಕೌನ್ಸಿಲ್ ಸಭೆಯಲ್ಲಿ ಎರಡೂ ಪಕ್ಷಗಳ ಸದಸ್ಯರು ಪರಸ್ಪರ ಆಕ್ರೋಶ ಹೊರಹಾಕಿದರು.
ಆರಂಭದಲ್ಲೇ ಆಡಳಿತ ಪಕ್ಷದ ನಾಯಕ, ಅಬ್ದುಲ್ ವಾಜಿದ್ ಮಾತನಾಡಿ, ಸರ್ಕಾರ 2017-18 ಮತ್ತು 2019-20ನೇ ಸಾಲಿನ ಬಜೆಟ್ ತಡೆಹಿಡಿದಿರುವುದರಿಂದ ಹಲವು ಕಾಮಗಾರಿಗಳು ನನೆಗುದಿಗೆ ಬಿದಿವೆ. ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಎನ್ನುವ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು. ಯಾವುದಾದರು ಕಾಮಗಾರಿಯ ಬಗ್ಗೆ ಅನುಮಾನವಿದ್ದರೆ ಆ ನಿರ್ದಿಷ್ಟ ಯೋಜನೆಯನ್ನು ತಡೆ ಹಿಡಿಯಬಹುದಾಗಿತ್ತು. ಆದರೆ, ಏಕಾಏಕಿ ಬಜೆಟ್ ತಡೆ ಹಿಡಿದಿರುವುದು ಸರಿಯಲ್ಲ. ಯಾವುದೇ ಸರ್ಕಾರ ಮಾಡದ ಹೊಸಸಂಪ್ರದಾಯವನ್ನು ಬಿಜೆಪಿ ಸರ್ಕಾರ ಪ್ರಾರಂಭಿಸಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, 2019-20ನೇ ಸಾಲಿನ ಬಜೆಟ್ ಕಾನೂನು ಬಾಹಿರವಾಗಿದೆ. ಸಚಿವರ ಅನುಮೋದನೆ ಪಡೆದುಕೊಳ್ಳದೆ ಇರುವುದೇ ಇಂದು ಇಷ್ಟೆಲ್ಲ ತೊಂದರೆಯಾಗಿರುವುದಕ್ಕೆ ಕಾರಣ. ಹಿಂದಿನ ಸಮ್ಮಿಶ್ರ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಂಡಿದೆ ಎಂದಾಗ ವಾಗ್ವಾದ ಶುರುವಾಯಿತು.
ಪದ್ಮನಾಭ ರೆಡ್ಡಿ, ಈ ಹಿಂದಿನ ಸರ್ಕಾರಗಳದ್ದು ಘೋಷಣೆಯಷ್ಟೇ ನೋ ಆ್ಯಕ್ಷನ್ ಪ್ಲಾನ್ ಎಂದು ದೂರಿದರು. ಈ ಹಂತದಲ್ಲಿ ಮಾಜಿ ಮೇಯರ್ ಮಂಜುನಾಥ ರೆಡ್ಡಿ ಅವರು, ‘ಪದ್ಮನಾಭ ರೆಡ್ಡಿ ದುರಂತ ನಾಯಕ, ಬಿಜೆಪಿ ಸದಸ್ಯರನ್ನು ಕತ್ತಲೆ ಕೋಣೆಯಲ್ಲಿ ದೂಡುತ್ತಿದ್ದಾರೆ’ ಎಂದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪದ್ಮನಾಭ ರೆಡ್ಡಿ, ‘ನೀನು ಅಯೋಗ್ಯ’ ಎಂದು ನಿಂದಿಸಿದರು.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಅನುದಾನ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದರು. ಇನ್ನೊಂದು ವಾರದಲ್ಲಿ ಬಜೆಟ್‌ಗೆ ಅನುಮೋದನೆ ನೀಡಿದಿದ್ದರೆ ಕಾಂಗ್ರೆಸ್‌ನ ಶಾಸಕರು, ಬಿಬಿಎಂಪಿ ಸದಸ್ಯರು ಪ್ರತಿಭಟನೆ ನಡೆಸುತ್ತೇವೆ ಎಂದು ಎಂ ಶಿವರಾಜು ಎಚ್ಚರಿಕೆ ನೀಡಿದರು.
ಇದೇ ವೇಳೆ ವೈಟ್ ಟಾಪಿಂಗ್ ರಸ್ತೆ ನಿರ್ಮಾಣದ ಬಗ್ಗೆ ಮಾತನಾಡಿದ, ಶಾಸಕ ಸತೀಶ್ ರೆಡ್ಡಿ ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಹಗರಣ ವಿಚಾರ ಪ್ರಸ್ತಾಪ ಮಾಡಿದರು. ವೈಟ್ ಟಾಪಿಂಗ್‌ಗೆ ಕಿ.ಮೀ ಗೆ 11ಕೋಟಿ ಖರ್ಚು ತೋರಿಸಿದ್ದಾರೆ. ನ್ಯಾಷನಲ್ ಹೈವೆಗಳಲ್ಲಿ 6 ಕೋಟಿ ಖರ್ಚಾಗುತ್ತದೆ. ಅದು ಹೈ ಕ್ವಾಲಿಟಿಯಲ್ಲೂ ಇರುತ್ತದೆ. ಆದರೆ ನಗರದೊಳಗೆ ಮಾಡುವ ವೈಟ್ ಟಾಪಿಂಗ್ ಗೆ ಹನ್ನೊಂದು ಕೋಟಿ ಖರ್ಚು ಯಾಕೆ? ಇದು ಎಷ್ಟರ ಮಟ್ಟಿಗೆ ಸರಿ, ಅಂತ ಮತದಾರರು ನಮ್ಮನ್ನ ಪ್ರಶ್ನಿಸುತ್ತಾರೆ. ಹೀಗಾಗಿ ವೈಟ್ ಟಾಪಿಂಗ್ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಅಂತ ಸ್ಪಷ್ಟನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಹಗರಣವಾಗಿದ್ರೆ ತನಿಖೆ ಮಾಡಿಸಲಿ. ಕೇಂದ್ರ ಸರ್ಕಾರವೇ ಈ ಯೋಜನೆಗೆ ಪ್ರಶಸ್ತಿ ನೀಡಿದೆ. ಹಗರಣ ನಡೆದಿದ್ರೆ ಅದನ್ನ ತಡೆ ಹಿಡಿಯಬೇಕಿತ್ತು ಎಂದರು.