ಬೆಂಗಳೂರು : ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಲಭೆ ಸೃಷ್ಟಿಸಿ ಸಾರ್ವಜನಿಕ ಆಸ್ತಿ ನಾಶಪಡಿಸಿದ ಕಿಡಿಗೇಡಿಗಳಿಂದ ನಷ್ಟ ವಸೂಲಿ ಮಾಡಲು ‘ಕ್ಲೇಮ್ ಕಮಿಷನರ್’ ನೇಮಕ ಮಾಡುವಂತೆ ಕೋರಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ತುರ್ತು ಅರ್ಜಿ ಸಲ್ಲಿಸಿದೆ. ಈ ಅರ್ಜಿ ನಾಳೆ ವಿಚಾರಣೆಗೆ ನಿಗದಿಯಾಗಿದೆ.
ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠದ ಮುಂದೆ ತುರ್ತು ಅರ್ಜಿ ಸಲ್ಲಿಸಿ, ಕ್ಲೇಮ್ ಕಮಿಷನರ್ ನೇಮಕ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ನಡೆಸಲಾದ ಬಂದ್ ವೇಳೆ ಉಂಟಾದ ನಷ್ಟದ ಅಂದಾಜು ಮತ್ತು ವಸೂಲಿಗೆ ಕ್ಲೇಮ್ ಕಮಿಷನರ್ ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ಹಾಜರುಪಡಿಸಲು ಸೂಚಿಸಿತು. ವಿಚಾರಣೆಯನ್ನು ನಾಳೆಗೆ ಮುಂದೂಡಿತು.
ಸರ್ಕಾರದ ಮನವಿ:
ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ 80 ಪೊಲೀಸರು ಗಾಯಗೊಂಡಿದ್ದಾರೆ. ಅಲ್ಲದೇ ಪೊಲೀಸ್ ಠಾಣೆಗಳಿಗೆ ಹಾನಿಯಾಗಿದೆ. ಪೊಲೀಸ್ ವಾಹನಗಳು ಸೇರಿದಂತೆ ಸಾರ್ವಜನಿಕರ ವಾಹನಗಳನ್ನು ಸುಟ್ಟು ಹಾಕಲಾಗಿದೆ. ಸಾಕಷ್ಟು ಪ್ರಮಾಣದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ನಷ್ಟವಾಗಿದೆ. ಸಾರ್ವಜನಿಕ ಆಸ್ತಿ ನಾಶಪಡಿಸಿದ ಕಿಡಿಗೇಡಿಗಳಿಂದ ನಷ್ಟ ವಸೂಲಿ ಮಾಡಲು ‘ಕ್ಲೇಮ್ ಕಮಿಷನರ್’ ನೇಮಕ ಮಾಡುವಂತೆ ಕೋರಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ತುರ್ತು ಅರ್ಜಿ ಸಲ್ಲಿಸಿದೆ.