ಬೆಂಗಳೂರು: ಜೆಡಿಎಸ್ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ ಕೆ ನಾಣು ಅವರನ್ನು ಆಯ್ಕೆ ಮಾಡಲಾಗಿದೆ. ಹಿರಿಯ ನಾಯಕ ಸಿ ಎಂ ಇಬ್ರಾಹಿಂ ನೇತೃತ್ವದಲ್ಲಿ ಕಾಡುಕೊಂಡನಹಳ್ಳಿಯಲ್ಲಿರುವ ಖಾಸಗಿ ಸಭಾಭವನದಲ್ಲಿ ಇಂದು ನಡೆದ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಒಂದು ಸಾಲಿನ ನಿರ್ಣಯವನ್ನು ತೆಲಂಗಾಣ ಜೆಡಿಎಸ್ ಅಧ್ಯಕ್ಷ ಸೂರಿ ಅವರು ಓದಿ ಹೇಳಿದರು.
ಡಿಸೆಂಬರ್ 9ರಂದು ರಾಷ್ಟ್ರೀಯ ಕಾರ್ಯಕಾರಣಿ ಸಭೆ ಕರೆದಿದ್ದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡರು, ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಸಿ ಕೆ ನಾಣು ಹಾಗೂ ರಾಜ್ಯಾಧ್ಯಕ್ಷರಾಗಿದ್ದ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಇದರ ಬೆನ್ನಲ್ಲೇ ಸಿ ಕೆ ನಾಣು ಇಂದು ಸಭೆ ಕರೆದು ದೇವೇಗೌಡರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ತೆಗೆದು, ತಾವೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ದೇವೇಗೌಡರಿಗೆ ಸಿ ಎಂ ಇಬ್ರಾಹಿಂ ಸೆಡ್ಡು ಹೊಡೆದಿದ್ದಾರೆ.
ಇಂಡಿಯಾ ಒಕ್ಕೂಟಕ್ಕೆ ಬೆಂಬಲ: ಈ ವೇಳೆ ಮಾತನಾಡಿದ ಸಿ ಎಂ ಇಬ್ರಾಹಿಂ, ದೇಶದಲ್ಲಿ ಎನ್ಡಿಎ ಹಾಗೂ ಇಂಡಿಯಾ ಒಕ್ಕೂಟ ಇದೆ. ನಾವು ಇಂಡಿಯಾ ಜೊತೆ ನಿಲ್ಲುತ್ತೇವೆ ಎಂದು ಘೋಷಿಸಿದರು. ರಾಷ್ಟ್ರೀಯ ಅಧ್ಯಕ್ಷರ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ನನ್ನ ನಿರ್ಣಯ ಅಲ್ಲ. ರಾಷ್ಟ್ರೀಯ ಕೌನ್ಸಿಲ್ನ ನಿರ್ಧಾರ. ಜಯಪ್ರಕಾಶ್ ನಾರಾಯಣರ ಸಿದ್ಧಾಂತದ ಮೇಲೆ ಜನತಾ ಪಕ್ಷ ಕಟ್ಟಲಾಯಿತು. ಎಲ್ಲಾ ರಾಜ್ಯಗಳ ಅಧ್ಯಕ್ಷರ ನೇಮಕವನ್ನು ನಾಣು ಅವರಿಗೆ ನೀಡಲಾಗಿದೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತದೆ. ರಾಹುಲ್ ಗಾಂಧಿಯವರಿಗೂ ಆಹ್ವಾನ ನೀಡಲಾಗುತ್ತದೆ. ಅಖಿಲೇಶ್ ಯಾದವ್ ಹಾಗೂ ನಿತೀಶ್ ಕುಮಾರ್ ಕೂಡ ಬರುತ್ತಾರೆ ಎಂದು ಹೇಳಿದರು.
ದೇವೇಗೌಡರ ಕುಟುಂಬ ಜೇನುಗೂಡಿಗೆ ಕೈ ಹಾಕಿದೆ. ನಮ್ಮ ಜೊತೆ ಐದು ಮಂದಿ ಶಾಸಕರು ಇದ್ದಾರೆ. ಕುಟುಂಬದ ಹಿತಕ್ಕೆ ಪಕ್ಷವನ್ನು ಬಲಿ ಕೊಟ್ಟರು. ಹಾಗಾಗಿ, ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ದೇವೇಗೌಡರನ್ನು ಕೆಳಗಿಳಿಸಲಾಗಿದೆ. ದೇವೇಗೌಡರು ಜಾಗಕ್ಕೆ ನಾಣುರನ್ನು ಆಯ್ಕೆ ಮಾಡಲಾಗಿದೆ. ನಾವು ಇಂದಿನ ಬೆಳವಣಿಗಳ ಬಗ್ಗೆ ಚುನಾವಣೆ ಆಯೋಗಕ್ಕೂ ತಿಳಿಸುತ್ತೇವೆ ಎಂದು ಇಬ್ರಾಹಿಂ ಹೇಳಿದರು.
ಸತ್ತವರ ಫೋಟೋ ಹಾಕಿದ್ದೀರಿ ಎಂದು ದೇವೇಗೌಡರು ಹೇಳಿದ್ರು. ಜಯಪ್ರಕಾಶ ನಾರಾಯಣ, ರಾಮ ಮನೋಹರ ಲೋಹಿಯಾ ಹಾಗೂ ಎಸ್.ಆರ್ ಬೊಮ್ಮಾಯಿ ಅವರು ಸತ್ತರೂ ಅಜರಾಮರ. ಆದರೆ, ಕೆಲವರು ಜೀವಂತವಾಗಿ ಇದ್ದರೂ ಇಲ್ಲದಂತಾಗಿದ್ದಾರೆ. ಸಿದ್ಧಾಂತ ಗಾಳಿಗೆ ತೂರಿದರು. ನಾವು ಮೂರು ಅವಕಾಶ ಕೊಟ್ಟೆವು. ಆದರೆ, ನಮ್ಮ ಮಾತು ಕೇಳಲಿಲ್ಲ ಎಂದು ಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.
ಮೂರು ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಆ ಚುನಾವಣೆಯಲ್ಲಿ ಎಲ್ಲೆಲ್ಲಿ ಸ್ಪರ್ಧೆ ಮಾಡಬೇಕೆಂಬುದರ ಕುರಿತು ನಿರ್ಧಾರ ಮಾಡಲಿದ್ದೇವೆ. ಸೀಟು ಹಂಚಿಕೆ ಕುರಿತು ರಾಹುಲ್ ಗಾಂಧಿ, ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಹಾಗೂ ಅಖಿಲೇಶ್ ಯಾದವ್ ಜೊತೆ ಚರ್ಚೆ ಮಾಡಲಿದ್ದೇವೆ. ರಾಜ್ಯದ ಜನತೆ ಮೇಲೆ ವಿಶ್ವಾಸವಿದೆ. ತತ್ವ ಸಿದ್ಧಾಂತ, ನ್ಯಾಯದ ಪರ ಇರುವ ನಮ್ಮನ್ನು ಜನರು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಪಾಲಿಗೆ ಐತಿಹಾಸಿಕ ದಿನ: 92ನೇ ವಯಸ್ಸಿನಲ್ಲಿ ತಮ್ಮ ಸಿದ್ದಾಂತ ಬಿಟ್ಟು ಕೊಟ್ಟಿದ್ದೀರಿ. ನಾನು ಹುಟ್ಟಿದ್ದು ಸಿದ್ದಾಂತಕ್ಕಾಗಿ. ವಾಜಪೇಯಿಯವರು ಮಂತ್ರಿಯಾಗಲು ಕರೆದರೂ ನಾನು ಹೋಗಲಿಲ್ಲ. ರಾಜ್ಯಪಾಲರಾಗಲು ಕರೆದರೂ ನಾನು ಹೋಗಲಿಲ್ಲ ಎಂದು ಹೆಚ್ಡಿಡಿಗೆ ತಿರುಗೇಟು ನೀಡಿದ ಇಬ್ರಾಹಿಂ, ಇಂದು ಜೆಡಿಎಸ್ ಪಕ್ಷದ ಪಾಲಿಗೆ ಐತಿಹಾಸಿಕ ದಿನ. ಜಾತ್ಯಾತೀತ ಸಿದ್ಧಾಂತ ಗಾಳಿಗೆ ತೂರಿ ಮಕ್ಕಳ ಹಿತಾಸಕ್ತಿ ಮೆರೆದ ದೇವೇಗೌಡರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ದೇವೆ. ಈ ಕುರಿತು ಚುನಾವಣಾ ಆಯೋಗಕ್ಕೂ ಮಾಹಿತಿ ನೀಡುತ್ತೇವೆ. ಇದೇ ನಿಜವಾದ ಜನತಾದಳ ಪಕ್ಷ. ನಮ್ಮದು ಸಿದ್ಧಾಂತ ಹೊಂದಿರುವ ಜೆಡಿಎಸ್ ಪಕ್ಷ. ನಮಗೇ ಜೆಡಿಎಸ್ ಪಕ್ಷದ ಚಿನ್ಹೆ ಕೊಡಬೇಕು. ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇವೆ ಎಂದು ಸಭೆ ನಂತರ ಇಬ್ರಾಹಿಂ ಹೇಳಿದರು.
ನಾಣು ಪ್ರತಿಕ್ರಿಯೆ: ಸಭೆಯಲ್ಲಿ ಸಿ.ಕೆ. ನಾಣು ಮಾತನಾಡಿ, ನಾನು ಕಳೆದ ಅನೇಕ ವರ್ಷಗಳಿಂದ ಜನತಾ ದಳದಲ್ಲಿ ಇದ್ದೇನೆ. ಹಿಂದಿನ ಸಭೆಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ನಾನು ಭಾಗಿಯಾಗಿದ್ದೇನೆ. ನನ್ನನ್ನು ಜನತಾದಳದಿಂದ ಉಚ್ಚಾಟಿಸಿದ ದೇವೇಗೌಡರನ್ನು ಕೇಳಲು ಬಯಸುತ್ತೇನೆ. ಅದೇನಂದರೆ, ಜನತಾ ದಳ ಜಾತ್ಯಾತೀತ ಸಿದ್ಧಾಂತದ ಮೇಲೆ ನಿಂತಿರುವ ಪಕ್ಷ. ಅದು ಮಹಾತ್ಮಾ ಗಾಂಧೀಜಿಯವರ ತತ್ವಗಳನ್ನು ಪಾಲಿಸುವ ಪಕ್ಷ. ಆದರೆ, ಗಾಂಧೀಜಿಯವರನ್ನು ವಿರೋಧಿಸುವವರೊಂದಿಗೆ ಜೆಡಿಎಸ್ ಸಖ್ಯ ಬೆಳೆಸುವುದು ಸರಿಯೇ? ಎಂದು ಪ್ರಶ್ನೆ ಮಾಡಿದರು.
ನೀವು ಪಕ್ಷದಲ್ಲಿನ ಇತರರ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ಬಿಜೆಪಿಯೊಂದಿಗೆ ಹೆಜ್ಜೆ ಹಾಕಿದರೆ ಅದನ್ನು ಪ್ರಶ್ನಿಸುವ ಅಧಿಕಾರ ಪಕ್ಷದಲ್ಲಿರುವ ನಾನೂ ಸೇರಿದಂತೆ ಇತರರಿಗೂ ಇದೆ. ಗಾಂಧೀಜಿಯವರ ತತ್ವಗಳನ್ನು ಬಲಿಕೊಟ್ಟು ಕೇವಲ ಚುನಾವಣೆಯ ಗೆಲುವಿಗಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ದೇವೇಗೌಡರ ವರ್ತನೆಯನ್ನು ನಾವು ಖಂಡಿಸುತ್ತೇವೆ ಎಂದರು.
ನಮ್ಮದೇ ನಿಜವಾದ ಜನತಾದಳ: ಜನತಾದಳ ಒರಿಜಿನಲ್ ಯಾವುದು? ಅನ್ನೋ ಪ್ರಶ್ನೆಗೆ ಉತ್ತರಿಸಿದ ಸಿ.ಕೆ.ನಾಣು, ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಬಿಟ್ಟುಕೊಡದೇ ಅದೇ ಜಾತ್ಯತೀತ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ನಮ್ಮ ನೇತೃತ್ವದ ಪಕ್ಷವೇ ನಿಜವಾದ ಜನತಾದಳ. ಜಾತ್ಯತೀತ ಗುಣವೇ ನಮ್ಮ ಪಕ್ಷದ ಆತ್ಮ ಇದ್ದಂತೆ. ಹೀಗಾಗಿ ಯಾರು ಏನೇ ಹೇಳಲಿ ನಾವು ಪಕ್ಷವನ್ನು ಬೇರೆಯವರಿಗೆ ಅಡ ಇಡುವುದಿಲ್ಲ ಮತ್ತು ಅದಕ್ಕೆ ಅವಕಾಶವನ್ನು ಕೊಡುವುದಿಲ್ಲ ಎಂದು ದೇವೇಗೌಡರಿಗೆ ಖಡಕ್ ಸಂದೇಶ ರವಾನಿಸಿದರು.
ಜೆಡಿಎಸ್ನಿಂದ ಸಿ ಕೆ ನಾಣು, ಸಿಎಂ ಇಬ್ರಾಹಿಂ ಉಚ್ಛಾಟನೆ; ಕಾರ್ಯಕಾರಣಿ ಸಭೆಯಲ್ಲಿ ನಿರ್ಣಯ