ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ಶ್ರಮ ವಹಿಸಿದ ಪೊಲೀಸ್, ಗೃಹರಕ್ಷಕ ದಳ, ಸಿವಿಲ್ ಡಿಫೆನ್ಸ್ ಸಿಬ್ಬಂದಿಗಳಿಗೆ ಹಾಗೂ ಸಹಕರಿಸಿದ ಬೆಂಗಳೂರಿನ ಜನತೆಗೆ ನಗರ ಪೊಲೀಸ್ ಆಯುಕ್ತ ಸಿ ಹೆಚ್ ಪ್ರತಾಪ್ ರೆಡ್ಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ರೆಡ್ಡಿ 'ಸಂಭ್ರಮಾಚರಣೆಯ ಸಂದರ್ಭದಲ್ಲಿ ತೊಂದರೆಯಾಗದಂತೆ ಪೊಲೀಸ್ ಇಲಾಖೆಯಿಂದ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಸಾರ್ವಜನಿಕರು ಸಹಕಾರವಿಲ್ಲದೇ ಯಾವುದೂ ಸಾಧ್ಯವಿರಲಿಲ್ಲ. ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ, ಸಿವಿಲ್ ಡಿಫೆನ್ಸ್ ಸಿಬ್ಬಂದಿ ಸೇರಿದಂತೆ ಸುಮಾರು ಹನ್ನೆರಡು ಸಾವಿರ ಜನ ರಾತ್ರಿಯಿಡಿ ಭದ್ರತೆಗೆ ಶ್ರಮ ವಹಿಸಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತಿದ್ದೇನೆ' ಎಂದಿದ್ದಾರೆ.
ಹೊಸ ವರ್ಷದ ರಾತ್ರಿ 78 ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣ: ಸಂಭ್ರಮಾಚರಣೆಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದವರ ವಿರುದ್ಧ ತಡರಾತ್ರಿ ಪ್ರಕರಣ ದಾಖಲಿಸಲಾಗಿದೆ. ವಿಶೇಷ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಸಂಚಾರಿ ಪೊಲೀಸರು ಕಳೆದ ಒಂದೇ ರಾತ್ರಿಯಲ್ಲಿ 78 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹಳೆ ವರ್ಷಕ್ಕೆ ಗುಡ್ ಬೈ, ಹೊಸ ವರ್ಷಕ್ಕೆ ಹಾಯ್! ಬೆಂಗಳೂರಿನಲ್ಲಿ ಮಧ್ಯರಾತ್ರಿ ಸಂಭ್ರಮ