ಬೆಂಗಳೂರು: ಕೊರೊನಾ ವೈರಸ್ ರೂಪಾಂತರಗೊಂಡಿದ್ದು, ಎಲ್ಲೆಡೆ ಆತಂಕ ಮನೆ ಮಾಡಿದೆ. ಇದರಿಂದ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ಈ ಕುರಿತಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ಸಿಲಿಕಾನ್ ಸಿಟಿ ಜನರಿಗೆ ಕೆಲ ಮಾಹಿತಿ ಜೊತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ತಡೆಯಲು ಸದ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಇಂದಿನಿಂದ ನಗರದಲ್ಲಿ ರಾತ್ರಿ 11ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಇರಲಿದ್ದು, ಯಾವುದೇ ಕಾರ್ಯಕ್ರಮ ನಡೆಯಲು ಅವಕಾಶ ಇರುವುದಿಲ್ಲ. ಇಂದು ಫ್ಲೈ ಓವರ್ ಮೇಲೆ ಅನಗತ್ಯ ವಾಹನಗಳ ಓಡಾಟ ತಡೆಗೆ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಕಾಬಂದಿ ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಲ್ಲಾ ಹೋಟೆಲ್ ,ರೆಸ್ಟೋರೆಂಟ್ಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. 2020 ಪ್ರತಿವರ್ಷದಂತೆ ಇರುವುದಿಲ್ಲ. ಕೋವಿಡ್ ನಿಯಮದ ಪ್ರಕಾರ ಎಲ್ಲಾ ಕೆಲಸಗಳು ಮುಗಿಯಬೇಕು. 11 ಗಂಟೆ ರೋಡ್ ಮೇಲೆ ಸಂಚರಿಸಲು ಅವಕಾಶ ಇರುವುದಿಲ್ಲ. ರಾತ್ರಿ ವೇಳೆ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಯಾವುದೇ ನಿರ್ಬಂಧವಿಲ್ಲ, ಜನವರಿ 01ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದ್ದು, ಸರ್ಕಾರದ ನಿಯಗಳನ್ನು ಜನತೆ ಪಾಲಿಸಬೇಕು. ದೂರದೂರುಗಳಿಗೆ ಪ್ರಯಾಣಿಸುವ ಬಸ್, ರೈಲ್ವೆ, ವಿಮಾನಯಾನ ಯಥಾಸ್ಥಿತಿ ಇದ್ದು, ಏರ್ಪೋರ್ಟ್ ಟ್ಯಾಕ್ಸಿ, ರೈಲ್ವೆ ನಿಲ್ದಾಣದ ಬಳಿ ಆಟೋ-ಟ್ಯಾಕ್ಸಿ ಲಭ್ಯ ಇರಲಿವೆ ಎಂದು ತಿಳಿಸಿದರು.
11 ಗಂಟೆ ಮೇಲೆ ಓಡಾಟ ಇರುವುದಿಲ್ಲ:
ಸರ್ಕಾರದ ಆದೇಶಗಳನ್ನು ಜನರು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಅನಾವಶ್ಯಕವಾಗಿ ಸಂಚಾರ ನಡೆಸಿದರೆ ಅಂತವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. 11 ಗಂಟೆ ಮೇಲೆ ಎಲ್ಲರೂ ಮನೆ ಸೇರಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ವರ್ಷಾಚರಣೆಗೆ ಬ್ರೇಕ್:
ಹೊಸ ವರ್ಷಾಚರಣೆ ದಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಯಾವುದೇ ಆಚರಣೆ ಇರಲ್ಲ. 11 ಗಂಟೆ ಬಳಿಕ ವಿನಾಕಾರಣ ರಸ್ತೆಗಳಿಯುವಂತಿಲ್ಲ. ಒಂದು ವೇಳೆ ರೂಲ್ಸ್ ಬ್ರೇಕ್ ಮಾಡಿದರೆ ಅಂಥವರನ್ನು ಕಸ್ಟಡಿಗೆ ಪಡೆದು ಕೇಸ್ ದಾಖಲಿಸಿಕೊಳ್ಳಲಾಗುವುದು ಎಂದು ಖಡಕ್ ಸಂದೇಶ ರವಾನಿಸಿದರು.