ಬೆಂಗಳೂರು: ಪಾದರಾಯನಪುರದಲ್ಲಿ ನಡೆದ ಘಟನೆಯನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದೆ. ಈಗಾಗ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಯಿ ಪೊಲೀಸ್ ಪವರ್ ಬಗ್ಗೆ ತಪ್ಪು ಮಾಡಿದವರಿಗೆ ತಿಳಿಸುತ್ತೇವೆ ಎನ್ನುವ ಮೂಲಕ ಪೊಲೀಸರಿಗೆ ಫುಲ್ ಪವರ್ ನೀಡಿದ್ದಾರೆ.
ಹೀಗಾಗಿ ಸದ್ಯ ನಗರದ ಎಲ್ಲೆಡೆ ಖಾಕಿ ಕಣ್ಗಾವಲು ಇದ್ದು, ಪ್ರತಿ ಠಾಣಾ ವ್ಯಾಪ್ತಿಯ ಚೆಕ್ ಪೋಸ್ಟ್ಗಳ ಬಳಿ ಪ್ರತಿ ವಾಹನ ತಪಾಸಣೆ ನಡೆಸಿ ಬಿಡುವಂತೆ ನಗರ ಆಯುಕ್ತ ಭಾಸ್ಕರ್ ರಾವ್ ಎಲ್ಲಾ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದ್ದಾರೆ. ಹಾಗೆ ಈಗಾಗ್ಲೇ ಬಿಬಿಎಂಪಿ 35 ಕಡೆ ಹಾಟ್ ಸ್ಪಾಟ್ ಪ್ರದೇಶಗಳನ್ನು ಗುರುತಿಸಿದ್ದು, ಅದರಲ್ಲಿ ಪಾದಾರಯನಪುರ ಹಾಗೂ ಬಾಪೂಜಿನಗರ ಸೀಲ್ ಡೌನ್ ಆಗಿವೆ. ಈ ಪ್ರದೇಶದಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪ್ರತಿ ಪ್ರದೇಶದಲ್ಲಿ ಡ್ರೋನ್ ಕಣ್ಗಾವಲಿನಲ್ಲಿ ಪ್ರತಿಯೊಂದು ಚಲನವಲನ ಸೆರೆಯಾಗಿ, ಹೊಯ್ಸಳ ಸಿಬ್ಬಂದಿ ಆ ಸ್ಥಳದಲ್ಲಿ ಗಸ್ತು ತಿರುಗಲಿದ್ದಾರೆ.
ಸದ್ಯ ನಗರಗಳಲ್ಲಿ ಕೊರೊನಾ ಸೋಂಕಿನ ಭೀತಿ ದಿನೇ ದಿನೇ ಹೆಚ್ಚಾಗಿ ಕಂಡು ಬರುತ್ತಿದ್ದು, ಕೆಲವರು ಲಾಕೌಡೌನ್ನ್ನು ಲೆಕ್ಕಿಸದೇ ಓಡಾಡ್ತಿದ್ದಾರೆ. ಹೀಗಾಗಿ ಇಂದಿನಿಂದ ಲಾಠಿ ಪ್ರಹಾರ ನಡೆಸೋದು ಖಚಿತ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಇನ್ನು ಪಾದರಾಯನಪುರ ಘಟನೆ ಕುರಿತು ಮಾತನಾಡಿದ ಅವರು, ಈಗಾಗಲೇ 8 ತಂಡಗಳನ್ನು ರಚಿಸಿದ್ದು, ಎಲ್ಲಾ ಕೆಲಸವನ್ನ ಆ ತಂಡದವರು ಮಾಡ್ತಾರೆ. ಹಾಗೆಯೇ 59 ಜನರನ್ನ ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಒಟ್ಟು 100 ಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದರು.