ಬೆಂಗಳೂರು : ಅಗತ್ಯ ಸೇವೆಗೆ ನೀಡುವ ಪಾಸ್ ಸದ್ಯ ಸಿಲಿಕಾನ್ ಸಿಟಿಯ ಬಹುತೇಕ ಕಡೆ ದುರುಪಯೋಗವಾಗುವ ಕಾರಣ ಈಗಾಗಲೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದಾರೆ.
ಈ ನಡುವೆ ಕೋವಿಡ್-19 ನಗರದಲ್ಲಿ ಮತ್ತಷ್ಟು ಉಲ್ಬಣವಾಗುತ್ತಿರುವ ಕಾರಣ ಮೆಡಿಕಲ್ ಶಾಪ್‌ಗಳಿಗೆ ಎಮರ್ಜೆನ್ಸಿ ಪಾಸ್ ನೀಡಲು ಬೆಂಗಳೂರು ಪೊಲೀಸರು ತೀರ್ಮಾನ ಮಾಡಿದ್ದಾರೆ. ಕೋವಿಡ್-19 ಹಾಗೂ ಇತರೆ ಕಾಯಿಲೆಗಳಿಗೆ ಔಷಧಿಗಳು ಅತ್ಯಗತ್ಯ. ಹಾಗೆಯೇ ಕೆಲವರಿಗೆ ಆಸ್ಪತ್ರೆಗೆ ಹೋಗಲು ಎಮರ್ಜೆನ್ಸಿ ಇರುವ ನಿಟ್ಟಿನಲ್ಲಿ ಮೆಡಿಕಲ್ಗಳ ಸೇವೆ ಅಗತ್ಯವಾಗಿರುತ್ತದೆ. ಹೀಗಾಗಿ ಮೆಡಿಕಲ್ಗಳಿಗೆ ಪಾಸ್ ನೀಡುವ ಅಧಿಕಾರವನ್ನು ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಇನ್ಸ್‌ಪೆಕ್ಟರ್‌ಗಳಿಗೆ ನಗರ ಪೊಲೀಸ್ ಆಯುಕ್ತರು ನೀಡಿದ್ದಾರೆ.
ಮೆಡಿಕಲ್ ಎಮರ್ಜೆನ್ಸಿ ಪಾಸ್ ಪಡೆಯುವವರು ಐಡಿ ಮತ್ತು ಅಡ್ರೆಸ್ ಪ್ರೂಫ್ ನೀಡಬೇಕು. ಒಂದು ಪೊಲೀಸ್ ಠಾಣೆಯಲ್ಲಿ 20ರವರೆಗೆ ಮೆಡಿಕಲ್ ಎಮರ್ಜೆನ್ಸಿ ಪಾಸ್ ನೀಡಲು ತೀರ್ಮಾನ ಮಾಡಲಾಗಿದೆ. ಈ ಪಾಸ್ 12 ಗಂಟೆಗಳ ಕಾಲ ಮಾತ್ರ ಮಾನ್ಯತೆ ಹೊಂದಿರುತ್ತದೆ. ನಂತರವು ಪಾಸ್ ಆ್ಯಕ್ಟೀವ್ ಆಗಿರ್ಬೇಕು ಅಂದರೆ ಪೊಲೀಸರ ಅನುಮತಿ ಪಡೆಯಬೇಕು. ಹಾಗೆಯೇ, ಮೆಡಿಕಲ್ ಎಮರ್ಜೆನ್ಸಿ ಮುಗಿದ ಬಳಿಕ ಪೊಲೀಸ್ ಠಾಣೆಗೆ ಪಾಸ್ ಹಿಂತಿರುಗಿಸಬೇಕು.
ಜೊತೆಗೆ ಇನ್ಸ್‌ಪೆಕ್ಟರ್‌ಗಳು ಯಾರ್ಯಾರಿಗೆ ಪಾಸ್ ನೀಡಿದ್ದೇವೆ ಅನ್ನೋದರ ಸಂಪೂರ್ಣ ಮಾಹಿತಿ ಸಂಗ್ರಹಿಸಿರಬೇಕು ಎಂದು ಆಯುಕ್ತರು ಠಾಣೆಗಳಿಗೆ ತಿಳಿಸಿದ್ದಾರೆ.