ಕಲಬುರಗಿ: ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಿಯಾಂಕ್ ಖರ್ಗೆಗೆ ಮತ್ತೊಮ್ಮೆ ಸಿಐಡಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಸಿಐಡಿ ಸಹಾಯಕ ತನಿಖಾಧಿಕಾರಿ ನರಸಿಂಹಮೂರ್ತಿ ಅವರು ಪ್ರಿಯಾಂಕ್ ಖರ್ಗೆಗೆ ನೋಟಿಸ್ ಜಾರಿ ಮಾಡಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಏಪ್ರಿಲ್ 24ರಂದು ಕಲಬುರಗಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ತಮ್ಮ ಬಳಿಯಿರುವ ಆಡಿಯೋ ಕ್ಲಿಪ್ ಹಾಗೂ ಎಲ್ಲಾ ದಾಖಲಾತಿ ಸಲ್ಲಿಸುವಂತೆ ಖರ್ಗೆಗೆ ಏಪ್ರಿಲ್ 25ರಂದು ಸಿಐಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ತಲುಪಿದ ಎರಡು ದಿನಗಳೊಳಗೆ ಕಚೇರಿಗೆ ಆಗಮಿಸಿ ಅಗತ್ಯ ಮಾಹಿತಿ ಸಲ್ಲಿಸಲು ಸಿಐಡಿ ತಿಳಿಸಿತ್ತು. ಆದರೆ ಸಿಐಡಿ ವಿಚಾರಣೆಗೆ ಹಾಜರಾಗಿರಲಿಲ್ಲ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಸಿಐಡಿ ನೋಟಿಸ್ಗೆ ಲಿಖಿತ ಉತ್ತರ ನೀಡಿದ ಪ್ರಿಯಾಂಕ್ ಖರ್ಗೆ
ಬಳಿಕ ಏಪ್ರಿಲ್ 28ರಂದು ಸಿಐಡಿ ನೀಡಿದ ನೋಟಿಸ್ಗೆ ಉತ್ತರಿಸಿದ್ದರು. ಪರಿಶೀಲನೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕವಾದ ಮಾಹಿತಿ ಇರಲಿಲ್ಲ. ಅಲ್ಲದೆ, ಉತ್ತರಿಸಿದ ಪತ್ರದಲ್ಲಿ ನನ್ನ ಬಳಿ ಇನ್ನೂ ಸಾಕ್ಷ್ಯಾಧಾರಗಳಿವೆ ಎಂದು ಶಾಸಕರು ಹೇಳಿದ್ದರು ಎನ್ನಲಾಗ್ತಿದೆ.
ಇದೀಗ ಸಿಐಡಿ ಮತ್ತೆ ಅವರಿಗೆ ಸಾಕ್ಷಿ ಹಾಜರುಪಡಿಸುವಂತೆ ಮತ್ತೊಮ್ಮೆ ನೋಟಿಸ್ ನೀಡಿದೆ. ನೋಟಿಸ್ ತಲುಪಿದ ಎರಡು ದಿನಗಳ ಒಳಗಾಗಿ ವಿಚಾರಣೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ: ಡಿಕೆಶಿ ಭ್ರಷ್ಟಾಚಾರಕ್ಕೆ ಹೆಸರುವಾಸಿ, ಜೈಲಿಗೆ ಹೋಗಿದ್ದ ವ್ಯಕ್ತಿ : ಭ್ರಷ್ಟ ಸಚಿವ ಹೇಳಿಕೆಗೆ ಅಶ್ವತ್ಥ್ ನಾರಾಯಣ ತಿರುಗೇಟು