ಬೆಂಗಳೂರು: ಕೋವಿಡ್-19 ಹಿನ್ನೆಲೆ ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಚರ್ಚ್, ಹೋಟೆಲ್ ಹಾಗೂ ಮಾಲ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
ಈ ಸಂಬಂಧ ರಾಜ್ಯ ಸರ್ಕಾರ ಇಂದು ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅದರಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದೆ. ಸಾರ್ವಜನಿಕರು ಸರಳವಾಗಿ ಮತ್ತು ಸುರಕ್ಷಿತವಾಗಿ ಹಬ್ಬ ಆಚರಿಸಬೇಕೆಂದು ಮನವಿ ಮಾಡಿದೆ.
ಕೇಂದ್ರ ಸರ್ಕಾರದ ಗೃಹ ಮಂತ್ರಾಲಯವು ಕೊವಿಡ್-19 ನಿಗಾವಣೆ ನಿಯಂತ್ರಣ ಮತ್ತು ಜಾಗ್ರತೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದು ಡಿ. 31ರವರೆಗೆ ಜಾರಿಯಲ್ಲಿರುತ್ತದೆ. ಅದರನ್ವಯ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಿದೆ. ರಾಜ್ಯದಲ್ಲಿ ಕೋವಿಡ್-19 ಸೋಂಕು ಹರಡಿದ್ದು, ಈ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಓದಿ: ಚೀನಾಗೆ ಬುದ್ಧಿ ಕಲಿಸಿದ ಭಾರತೀಯರು: ಡ್ರ್ಯಾಗನ್ ಕಂಪನಿಗಳ ಮೊಬೈಲ್ ಮಾರಾಟ ಕುಸಿತ... ಹಾಗಿದ್ರೆ ನಂ.1 ಯಾರು?
ಕೋವಿಡ್-19 ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಸಂಬಂಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕ್ರಿಸ್‌ಮಸ್ ಹಬ್ಬ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯನ್ನು ಸರಳವಾಗಿ ಮತ್ತು ಅರ್ಥಗರ್ಭಿತವಾಗಿ ಆಚರಿಸುವ ಅವಶ್ಯಕತೆ ಇದೆ.
ಈ ಸಂದರ್ಭದಲ್ಲಿ ರಾಜ್ಯದಾದ್ಯಂತ ಸಾಮಾಜಿಕ ಅಂತರವಿಲ್ಲದೆ ಹೆಚ್ಚಿನ ಜನರು ಸೇರುವ ಸಾಮೂಹಿಕ ಕೂಟಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಹೆಚ್ಚು ಜನಸಂಖ್ಯೆಯುಳ್ಳ ವಸತಿ ಸಮುಚ್ಚಯಗಳಲ್ಲಿ ಹಾಗೂ ಜನ ಸೇರತಕ್ಕಂತ ಸ್ಥಳಗಳಲ್ಲಿ ಆಯೋಜಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಆಚರಣೆಯಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಹಚ್ಚಲು ಹೊರಡಿಸಿರುವ ಸರ್ಕಾರದ ಆದೇಶದಲ್ಲಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ಡಿ. 20ರಿಂದ ಜ. 2ರವರಗೆ ಚಾಲ್ತಿಯಲ್ಲಿರುತ್ತವೆ.
ಈ ಮಾರ್ಗಸೂಚಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು, ಪೊಲೀಸ್ ಆಯುಕ್ತರುಗಳು, ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಇಲಾಖಾ ಮುಖ್ಯಸ್ಯರುಗಳು ಮತ್ತು ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸತಕ್ಕದ್ದು ಎಂದು ಹೇಳಲಾಗಿದೆ.