ಬೆಂಗಳೂರು: ಕಲಾಭಿಮಾನಿಗಳಿಗೆ ಕಲೆಯ ಹಬ್ಬವನ್ನೇ ಉಣಬಡಿಸುತ್ತಿದ್ದ ಚಿತ್ರಕಲಾ ಪರಿಷತ್‌ನ 'ಚಿತ್ರ ಸಂತೆ' ಈ ಹಿಂದೆ ಕೋವಿಡ್ ಕಾರಣಕ್ಕೆ ಕಳೆಗುಂದಿತ್ತು. ಆದರೆ ಇತಿಹಾಸ ಮರುಕಳಿಸಿದಂತೆ ಈ ಬಾರಿಯ ಚಿತ್ರಸಂತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದ್ಧೂರಿ ಚಾಲನೆ ನೀಡಿದ್ದು, ಸಾರ್ವಜನಿಕರು ಮತ್ತೆ ಚಿತ್ರಕಲಾವಿದರ ಕೈಚಳಕವನ್ನು ವೀಕ್ಷಿಸಲು ಮುಗಿಬಿದ್ದಿದ್ದಾರೆ.
ಕುಮಾರ ಕೃಪಾ ರಸ್ತೆಯಲ್ಲಿ ನಡೆಯುತ್ತಿರುವ ಚಿತ್ರಸಂತೆಗಾಗಿ ಚಿತ್ರಕಲಾ ಪರಿಷತ್‌ಗೆ ನೂರಾರು ಮಂದಿ ಸ್ವಾತಂತ್ರ್ಯ ಹೋರಾಟಗಾರರು ಪೇಂಟಿಂಗ್ ರೂಪದಲ್ಲಿ ಮೂಡಿದ್ದು ವಿಶೇಷವಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಈ ಬಾರಿ ಚಿತ್ರಸಂತೆಯನ್ನು ಸ್ವಾತಂತ್ರ್ಯ ಯೋಧರಿಗೆ ಸಮರ್ಪಿಸಲಾಗಿದೆ.
ದೇಶ್ ಬಂಧು ಗುಪ್ತ, ರಣ್‌ಬೀರ್ ಸಿಂಗ್, ಪೀರ್ ಅಲಿಖಾನ್ ಮುಂತಾದ 200 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಪರಿಷತ್‌ನ ಆವರಣದಲ್ಲಿ ಕಲಾಭಿಮಾನಿಗಳನ್ನು ಸ್ವಾಗತಿಸುತ್ತಿದ್ದಾರೆ. ದೇಶದ 16 ರಾಜ್ಯಗಳಿಂದ 1000ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. 1300 ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ದಾರೆ.
5 ಕಲಾವಿದರ ಕಲಾಕೃತಿಗಳು 10 ದಿನಗಳವರೆಗೆ ಪ್ರದರ್ಶನ: ಪರಿಷತ್ತಿನ 12 ಗ್ಯಾಲರಿಗಳಲ್ಲಿ ಮತ್ತು ಆಯ್ದ ಮಳಿಗೆಗಳಲ್ಲಿ ಯೌರು ಕಲಾವಿದರ ಕಲಾಕೃತಿಗಳು 10 ದಿನಗಳವರೆಗೆ ಪ್ರದರ್ಶನ ಕಾಣಲಿವೆ. ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಚಿತ್ರಸಂತೆ ನಡೆಯುವ ಸ್ಥಳದಲ್ಲಿ ಕಲಾ ಪ್ರದರ್ಶನವನ್ನು ಸಹ ನೀಡುತ್ತಿದ್ದಾರೆ.
ಕಳೆದ ಬಾರಿ ಆನ್‌ಲೈನ್ ಚಿತ್ರಸಂತೆ: ಕೋವಿಡ್ ಕಾರಣ ಕಳೆದ ವರ್ಷ 18ನೇ ಚಿತ್ರಸಂತೆಯನ್ನು ಆನ್‌ಲೈನ್ ಮೂಲಕ ನಡೆಸಲಾಗಿತ್ತು. ಈ ವರ್ಷ ಜನವರಿ ಮೊದಲ ವಾರ ನಡೆಯಬೇಕಾಗಿದ್ದ 19ನೇ ಚಿತ್ರಸಂತೆಯನ್ನು ಕೋವಿಡ್ ಮೂರನೇ ಅಲೆ ಹಿನ್ನೆಲೆ ಇದೀಗ ನಡೆಸಲಾಗುತ್ತಿದೆ. ಕುಮಾರ ಕೃಪಾ ರಸ್ತೆಯಲ್ಲಿ ಸಂತೆ ನಡೆಯುತ್ತಿದ್ದರೂ ಸುತ್ತಮುತ್ತಲಿನ ರಸ್ತೆಗಳನ್ನು ಸಂತೆಗೆ ಬಳಸಲಾಗುತ್ತಿದೆ. ಅದೇ ರೀತಿ ಈ ಬಾರಿ ಚಿತ್ರದಂತೆ ಕ್ರೆಸೆಂಟ್ ರಸ್ತೆ ಸೇರಿದಂತೆ, ಒಳರಸ್ತೆಗಳನ್ನೂ ಚಿತ್ರಸಂತೆಗೆ ಬಳಸಿಕೊಳ್ಳಲಾಗುತ್ತಿದೆ.
ಪರಿಷತ್ತಿನ ಆವರಣದಲ್ಲಿ ಹಿರಿಯ ಕಲಾವಿದರ ಕಲಾಕೃತಿಗಳ ಪ್ರದರ್ಶನ: ಹಿರಿಯ ಕಲಾವಿದರು ಹಾಗೂ ವಿಕಲಚೇತನರಿಗೆ ಪರಿಷತ್ತಿನ ಆವರಣದಲ್ಲಿಯೇ ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆವರಣದ ಒಳಗಡೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎರಡು ಎಟಿಎಂ ಯಂತ್ರಗಳು ಹಾಗೂ ಹೊರಗಡೆ ಕೆನರಾ ಬ್ಯಾಂಕ್‌ನ ಒಂದು ಸಂಚಾರಿ ಎಟಿಎಂ ಸಾರ್ವಜನಿಕರ ಅನುಕೂಲಕ್ಕೆ ಇಡಲಾಗಿದೆ. ಕೆಲ ಕಲಾವಿದರು ಪೇಟಿಯಂ, ಫೋನ್‌ಪೇ, ಗೂಗಲ್ ಪೇಗಳ ಮೂಲಕ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಆದ್ದರಿಂದ ಗ್ರಾಹಕರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ.
4 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆ: ಈಗ ನಡೆಯುತ್ತಿರುವ ಚಿತ್ರಸಂತೆಗೆ 4 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆ ಇದೆ. 17ನೇ ಚಿತ್ರಸಂತೆಯಲ್ಲಿ 3 ಕೋಟಿಗೂ ಅಧಿಕ ಮೊತ್ತದ ಕಲಾಕೃತಿಗಳು ಮಾರಾಟವಾಗಿದ್ದವು. ಆನ್‌ಲೈನ್ ವೇದಿಕೆಯಲ್ಲಿ ನಡೆದ 18ನೇ ಚಿತ್ರಸಂತೆಯನ್ನು 11.39 ಲಕ್ಷ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿದ್ದರು. 1.58 ಲಕ್ಷ ಜನ ವೆಬ್ ಪೋರ್ಟಲ್‌ಗೆ ಭೇಟಿ ನೀಡಿದ್ದರು ಎಂದು ಪರಿಷತ್ ಅಧ್ಯಕ್ಷ ಬಿ. ಎಲ್. ಶಂಕರ್ ಮಾಹಿತಿ ನೀಡಿದ್ದಾರೆ.
ಚಿತ್ರಸಂತೆಗೆ ಹಿಂದಿನ ಕಳೆಯಿಲ್ಲ: ಕೋವಿಡ್ಗೂ ಮೊದಲು ನಡೆಯುತ್ತಿದ್ದ ಚಿತ್ರಸಂತೆಗೆ ಹೋಲಿಸಿದರೆ ಪ್ರಸಕ್ತ ಸಾಲಿನ ಚಿತ್ರಸಂತೆ ಹಿಂದಿನಷ್ಟು ಜನರನ್ನು ಆಕರ್ಷಿಸುವಲ್ಲಿ ಸಫಲತೆ ಸಾಧಿಸಿಲ್ಲ. 2019ರ ಡಿಸೆಂಬರ್ನಲ್ಲಿ ನಡೆದ ಚಿತ್ರಸಂತೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡು ಸಾವಿರಾರು ಕಲಾಕೃತಿಗಳನ್ನು ಖರೀದಿಸಿದ್ದರು. ಆದರೆ 2 ವರ್ಷಗಳ ಬಳಿಕ ನಡೆಯುತ್ತಿರುವ ಚಿತ್ರಸಂತೆಯಲ್ಲಿ ನಿರೀಕ್ಷಿತ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದರೂ, ಕಳೆದ ವರ್ಷಗಳಿಗೆ ಹೋಲಿಸಿದರೆ ಕಲಾಭಿಮಾನಿಗಳ ಭೇಟಿ ಕೊಂಚ ಕಡಿಮೆಯಾಗಿದೆ.
ಡಿಸೆಂಬರ್ ತಿಂಗಳ ಚಳಿಗಾಲದಲ್ಲಿ ನಡೆಯುತ್ತಿದ್ದ ಚಿತ್ರಸಂತೆ ನಿರ್ಬಂಧಗಳ ಹಿನ್ನೆಲೆ ಮಾರ್ಚ್ ತಿಂಗಳ ಕೊನೆಯ ಬಿರು ಬೇಸಿಗೆಯಲ್ಲಿ ನಡೆದದ್ದು ಸಹ ಒಂದು ಕಾರಣ ಇರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಜನರಲ್ಲಿ ಕೊಳ್ಳುವ ಹಾಗೂ ವೀಕ್ಷಿಸುವ ಆಸಕ್ತಿ ಒಂದಿಷ್ಟು ಪ್ರಮಾಣದಲ್ಲಿ ಕಡಿಮೆ ಆಗಿದೆ ಎನ್ನುವ ಅನುಮಾನ ಮೂಡಿಸುವಂತಿತ್ತು ಈ ಬಾರಿಯ ಚಿತ್ರಸಂತೆ.
ಗಣನೀಯವಾಗಿ ಇಳಿದ ಕಲಾಭಿಮಾನಿಗಳ ಸಂಖ್ಯೆ: ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಸಾಕಷ್ಟು ಮಂದಿ ಬೆಂಗಳೂರು ನಗರವನ್ನು ತೊರೆದಿದ್ದು ಇದುವರೆಗೂ ಹಿಂದಿರುಗಿಲ್ಲ. ಕಲಾಕೃತಿಗಳನ್ನು ಅತಿಹೆಚ್ಚು ಸಂಖ್ಯೆಯಲ್ಲಿ ಕೊಳ್ಳುತ್ತಿದ್ದ ಟೆಕ್ಕಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಹಿನ್ನೆಲೆ ಬೆಂಗಳೂರು ನಗರವನ್ನು ತೊರೆದಿದ್ದಾರೆ. ಅಲ್ಲದೇ ದೊಡ್ಡ ಸಂಖ್ಯೆಯಲ್ಲಿ ಕಲಾ ಪೋಷಕರಾಗಿ ಗೋಚರಿಸುತ್ತಿದ್ದ ವಿದೇಶಿ ಪ್ರಜೆಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹಿಂದಿನ ಚಿತ್ರಸಂತೆಗೆ ಹೋಲಿಸಿದರೆ ಈ ಬಾರಿ ಕಲಾಭಿಮಾನಿಗಳ ಹಾಗೂ ಕಲಾ ಪೋಷಕರ ಸಂಖ್ಯೆ ಗಣನೀಯವಾಗಿ ಇಳಿದಿದೆ ಎಂದು ಸಾಕಷ್ಟು ಕಲಾವಿದರು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರಸಂತೆಯಲ್ಲಿ ಸದಾ ಪಾಲ್ಗೊಳ್ಳುವ ಕಲಾವಿದ ಸೋಮಶೇಖರ್ ಪ್ರಕಾರ, ಮಧ್ಯಾಹ್ನ 12 ಗಂಟೆಯೊಳಗೆ ಹಿಂದಿನ ಚಿತ್ರಸಂತೆಯಲ್ಲಿ 10ಕ್ಕೂ ಹೆಚ್ಚು ಚಿತ್ರಗಳು ಮಾರಾಟವಾಗಿದ್ದವು. ಆದರೆ ಈ ಸಾರಿ ಎರಡು ಚಿತ್ರಗಳು ಮಾತ್ರ ಮಾರಾಟವಾಗಿವೆ. ಇತ್ತೀಚಿನ ತಿಂಗಳುಗಳಲ್ಲಿ ಬಿಡಿಸಿದ ಆಕರ್ಷಕ ಚಿತ್ರಗಳನ್ನು ಪ್ರದರ್ಶನದಲ್ಲಿ ಇಟ್ಟರು ಕೊಳ್ಳುಗರು ಆಸಕ್ತಿ ತೋರಿಸುತ್ತಿಲ್ಲ.
ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಕೊಳ್ಳುವ ಆಸಕ್ತಿ ಹಾಗೂ ಸಾಮರ್ಥ್ಯ ಎಲ್ಲರಲ್ಲಿಯೂ ಇಲ್ಲ. ಬೆಳಗಿನಿಂದಲೂ ಬರುವವರನ್ನು ಗಮನಿಸುತ್ತಿದ್ದೇನೆ. ಈ ಹಿಂದೆ ಚಿತ್ರಸಂತೆಗೆ ಬಂದು ನನ್ನ ಕಲಾಕೃತಿಯನ್ನು ಖರೀದಿಸಿದ್ದ ಅನೇಕ ಕಲಾಭಿಮಾನಿಗಳು ಇಂದಿನ ಆಸಕ್ತಿಯಿಂದ ಚಿತ್ರಸಂತೆಯಲ್ಲಿ ಪಾಲ್ಗೊಂಡಿಲ್ಲ. ಕೋವಿಡ್ ನಂತರ ಸಾಕಷ್ಟು ಆರ್ಥಿಕ ಸಂಕಷ್ಟ ಜನರಿಗೆ ಎದುರಾಗಿದೆ. ಇದರ ಪರಿಣಾಮ ವಿವಿಧ ಕ್ಷೇತ್ರಗಳ ಮೇಲೆ ಆಗಿದ್ದು ನಮ್ಮಂತ ಕಲಾವಿದರಿಗೂ ಇದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಗಮನ ಸೆಳೆಯುತ್ತಿರುವ ಅಪ್ಪು ಕಲಾಕೃತಿ: ಚಿತ್ರಸಂತೆಯಲ್ಲಿ ನಟ ಪುನೀತ್ ರಾಜಕುಮಾರ್ ಚಿತ್ರಗಳು ಅಲ್ಲಲ್ಲಿ ಕಂಡು ಗಮನ ಸೆಳೆಯುತ್ತಿವೆ. ಉಳಿದಂತೆ ಕಲಾವಿದರೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚಿತ್ರವನ್ನು ಬಿಡಿಸಿ ಪ್ರದರ್ಶನಕ್ಕೆ ಇರಿಸಿದ್ದಾರೆ. ಇದಲ್ಲದೆ ಹೊಡೆದ ಗಾಜುಗಳನ್ನು ಜೋಡಿಸಿ ರಚಿಸಿದ ವಿಭಿನ್ನ ಕಲಾಕೃತಿ ಗಮನ ಸೆಳೆಯುತ್ತದೆ. ಸಾಕಷ್ಟು ಹೊಸ ವಿಧದ ಕಲಾಕೃತಿಗಳು ಚಿತ್ರಸಂತೆಯಲ್ಲಿವೆ. ಆದರೆ ವಿಶೇಷವಾಗಿ ಗಮನ ಸೆಳೆಯುವ ಕೆಲವೇ ಕೆಲವು ಕಲಾಕೃತಿಗಳು ಮಾತ್ರ ಚಿತ್ರಸಂತೆಯಲ್ಲಿ ಗೋಚರಿಸುತ್ತಿವೆ.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಚಿತ್ರಕಲಾ ವಿಶ್ವವಿದ್ಯಾಲಯ ಸ್ಥಾಪನೆ : ಬೊಮ್ಮಾಯಿ ಭರವಸೆ