ಬೆಂಗಳೂರು: ನಮ್ಮ ದೇಶದ ಜೊತೆ ಚೀನಾ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಕುತಂತ್ರದಿಂದ ಹಿಂದಿನಿಂದ ಮುಚ್ಚುವ ಕಾರ್ಯ ಮಾಡುತ್ತಿದೆ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಚೀನಾ - ಭಾರತ ಗಡಿಯಲ್ಲಿ ಸೈನಿಕರ ಘರ್ಷಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಹಿಂದೆ ನೆಹರು ಕಾಲದಲ್ಲೂ ಅವರು ದಾಳಿ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಚೀನಾದವರಿಗೆ ಅಷ್ಟೊಂದು ಬೆಲೆ ಕೊಡಬಾರದಿತ್ತು. ನೆರೆಹೊರೆಯವರು ಅಂತ ಇವರು ಅಲ್ಲಿಗೆ ಹೋಗಿದ್ದಾರೆ. ಅವರು ಇಲ್ಲಿಗೆ ಬಂದಿದ್ದಾರೆ. ಇಷ್ಟಾದರೂ ಚೀನಾ ಬ್ಯಾಕ್ ಸ್ಟಾಂಪಿಂಗ್ ಮಾಡೋದು ಬಿಟ್ಟಿಲ್ಲ. ಕಣ್ಣಾಮುಚ್ಚಾಲೆ ಆಟವನ್ನ ಆಡ್ತಿದೆ. ಇವತ್ತು ಇಡೀ ದೇಶದ ಜನ ಒಂದಾಗಿದ್ದಾರೆ. ಇವತ್ತು ಭಿನ್ನಾಬಿಪ್ರಾಯದ ಹೇಳಿಕೆಗಳು ಸರಿಯಲ್ಲ. ನೆಲ, ಜಲ ಭಾಷೆ, ರಾಷ್ಟ್ರೀಯತೆ ಬಂದಾಗ ಒಟ್ಟಾಗಿ ಎದುರಿಸಬೇಕು ಎಂದರು.
ಕುತಂತ್ರ ನಡೆಸುತ್ತಾರೆ:
ನಾವು ಹೋಗಿಲ್ಲ, ಅವರೂ ಬಂದಿಲ್ಲ ಎಂದು ಪ್ರಧಾನಿ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಕೆಲವೊಮ್ಮೆ ಪ್ರಶ್ನೆ ಕೇಳ್ತಾರೆ. ಇದರ ಬಗ್ಗೆ ತಿರುಚಿ ವರದಿಯಾಗುತ್ತೆ. ಸರ್ವಪಕ್ಷ ಸಭೆ ನಡೆಸಲಾಗಿದೆ. ಅಲ್ಲಿ ಕೆಲವು ನಾಯಕರು ಸಲಹೆ ನೀಡಿದ್ದಾರೆ. ಒಂದು ಕಡೆ ಕೋವಿಡ್, ಮತ್ತೊಂದೆಡೆ ಚೀನಾ ಕುತಂತ್ರ ನಡೆಸುತ್ತಿದೆ ಎಂದಿದ್ದಾರೆ.
ಇರುವ ವಿಚಾರವನ್ನ ಪ್ರಧಾನಿಯವರು ದೇಶದ ಮುಂದಿಡಬೇಕು. ಇಂತಹ ವಿಚಾರಗಳನ್ನ ಮುಚ್ಚಿಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರದ ನಡೆಗೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಗುಪ್ತಚರ ವಿಫಲವಾಗಿದ್ದರೂ ಹೇಳಬೇಕು. ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟಿಲ್ಲ ಅಂದ್ರೂ ಹೇಳಬೇಕು. ಜನರಲ್ಲಿ ತಪ್ಪು ಭಾವನೆ ಹೋಗಬಾರದು. ಚೀನಾದ್ದು ಯಾವಾಗಲೂ ನರಿ ಬುದ್ಧಿಯೇ. ಪ್ರಧಾನಿಯವರು ಇದರ ಬಗ್ಗೆ ಯಾವುದನ್ನೂ ಮುಚ್ಚಿಡಬಾರದು ಎಂದಿದ್ದಾರೆ.
ಶಸ್ತ್ರಾಸ್ತ್ರಗಳನ್ನ ಕೊಡದೆ ಇರೋದು ಹೇಗೆ?
ನಾವು ಅಲ್ಲಿಗೆ ಹೋಗಿಲ್ಲ, ಅವರು ಬಂದಿಲ್ಲ ಅಂದರೆ ಹೇಗೆ? ಹಾಗಾದ್ರೆ 20 ನಮ್ಮ ಸೈನಿಕರು ಹುತಾತ್ಮರಾಗಿದ್ದು ಹೇಗೆ? ಅವರಿಗೆ ಶಸ್ತ್ರಾಸ್ತ್ರಗಳನ್ನ ಕೊಡದೆ ಇರೋದು ಹೇಗೆ? ಈ ಎಲ್ಲಾ ಪ್ರಶ್ನೆಗಳು ಉದ್ಭವವಾಗೋದು ಸಹಜ. ರಕ್ಷಣಾ ದೃಷ್ಟಿಯಿಂದ ಕೆಲವೊಂದು ಹೇಳೋಕೆ ಕಷ್ಟವಾಗಬಹುದು. ಆದರೆ, ಮಾಧ್ಯಮಗಳಲ್ಲಿ ಬಂದ ನಂತರ ನಿಜ ಸ್ಥಿತಿ ತಿಳಿಸಬೇಕು ಎಂದರು.