ಬೆಂಗಳೂರು : ಸಾಂಕ್ರಾಮಿಕ ಕೊರೊನಾ ಸೋಂಕು ಯಾವೆಲ್ಲಾ ಘಟನೆಗಳಿಗೆ, ಪರಿಸ್ಥಿತಿಗೆ ಸಾಕ್ಷಿಯಾಯ್ತು ಅನ್ನೋದನ್ನ ನೋಡಿದ್ದೇವೆ. ಅದರಲ್ಲೂ ಶೈಕ್ಷಣಿಕ ಕ್ಷೇತ್ರಕ್ಕೆ ಕೊಟ್ಟ ಪೆಟ್ಟಿಗೆ ಸುಧಾರಿಸಿಕೊಳ್ಳಲು ಇನ್ನು ಸಮಯವೇ ಬೇಕು.
ಸರ್ಕಾರಿ-ಖಾಸಗಿ ಶಾಲೆಗಳೆಂಬ ತಾರತಮ್ಯವಿಲ್ಲದೇ ಮಕ್ಕಳ ನಿರಂತರ ಕಲಿಕೆಗೆ ಅಡ್ಡಗಾಲು ಹಾಕಿದೆ ಈ ಕೊರೊನಾ ಸೋಂಕು. ಅಷ್ಟೇ ಅಲ್ಲ, ಶಾಲಾ ಶುಲ್ಕದ ಜಟಾಪಟಿಯು ನಡೆಯುತ್ತಿದ್ದು, ಸದ್ಯ ಕೋರ್ಟ್ ಮೆಟ್ಟಲು ಏರಿದೆ.
ಅಂದಹಾಗೇ, ಕೋವಿಡ್ ಸಂಕಷ್ಟದಲ್ಲಿ ಸರ್ಕಾರಿ ಶಾಲಾ ಮಕ್ಕಳಷ್ಟೇ ಅಲ್ಲ, ಖಾಸಗಿ ಶಾಲಾ ಮಕ್ಕಳು ಕೂಡ ಸಂಕಷ್ಟದಲ್ಲಿದ್ದಾರೆ. ಇದನ್ನ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ನಿರಂತರ ಕಲಿಕೆಯನ್ನ ನಾವು ಕೊಡ್ತಿದ್ದೇವೆ. ಆದರೆ,ಮಕ್ಕಳು ಇದರಿಂದ ವಂಚಿತರಾಗುತ್ತಿದ್ದಾರೆ.
ಶಾಲೆಗೆ ಗೊತ್ತಿಲ್ಲದೇ ಪೋಷಕರು ಮಾಹಿತಿ ಕೊಡದೇ, ವಿದ್ಯಾರ್ಥಿಗಳು ಶಾಲೆ ತೊರೆದಿದ್ದಾರೋ, ಬೇರೆ ಶಾಲೆಗೆ ದಾಖಲಾಗಿದ್ದಾರೋ, ಬಾಲ ಕಾರ್ಮಿಕ ಪದ್ಧತಿಗೆ ಅಥವಾ ಬಾಲ್ಯವಿವಾಹಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ ಅಂತಾ ಕ್ಯಾಮ್ಸ್ನ ಕಾರ್ಯದರ್ಶಿ ಶಶಿಕುಮಾರ್ ಆತಂಕ ವ್ಯಕ್ತಪಡಿಸಿದರು.
ಕ್ಯಾಮ್ಸ್ ಅಡಿಯಲ್ಲಿ ನೋಂದಣಿಯಾಗಿರುವ ರಾಜ್ಯದ ವಿವಿಧ ಶಾಲೆಗಳ ಒಟ್ಟು 250 ಶಾಲೆಗಳಲ್ಲಿ ಸರ್ವೇ ನಡೆಸಿದ್ದು, ಇದರಲ್ಲಿ 60,094 ವಿದ್ಯಾರ್ಥಿಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. 250 ಶಾಲೆಗಳಲ್ಲಿ 1,85,933 ಜನ ವಿದ್ಯಾರ್ಥಿಗಳಿದ್ದು, ಇದರಲ್ಲಿ ಕೇವಲ 1,25,839 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 60,094 ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಇಲ್ಲದಿರುವುದು ಕಂಡು ಬಂದಿದೆ. ಇದು ಕೇವಲ ಸ್ಯಾಂಪಲ್ ಅಷ್ಟೇ, ಖಾಸಗಿ ಶಾಲೆಯಲ್ಲೂ ಲಕ್ಷಾಂತರ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯುಂಟಾಗಿದೆ.
ಪೋಷಕರ ನಂಬರ್ ಸ್ವಿಚ್ ಆಫ್- ಅಡ್ರೆಸ್ ಚೇಂಜ್ : ಸರ್ವೇ ನಡೆಸಲು ಮುಂದಾದ ಸಂದರ್ಭದಲ್ಲಿ ಶಾಲೆಯಿಂದ ದೂರ ಉಳಿದ ಮಕ್ಕಳ ಸಂಪರ್ಕದ ಕುರಿತು ಮಾಹಿತಿ ನೀಡಿದ ಶಶಿಕುಮಾರ್, ಬಹಳಷ್ಟು ಪೋಷಕರು ಶಾಲೆಯಿಂದ ಕರೆಗಳು ಬರುತ್ತವೆ ಅಂತಾನೇ ತಮ್ಮ ನಂಬರ್ ಸ್ವಿಚ್ ಆಫ್ ಮಾಡಿದ್ದಾರೆ. ಹಲವರು ನಂಬರ್‌ನೇ ಬದಲಾಯಿಸಿದ್ದಾರೆ.
ಇನ್ನೂ ಕೆಲವರು ಮನೆಯನ್ನೇ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಕೆಲ ಪೋಷಕರು ಮಕ್ಕಳ ಬಗ್ಗೆ ಯಾವ ಮಾಹಿತಿಯನ್ನೂ ಶಾಲೆಗೆ ಬಿಟ್ಟು ಕೊಟ್ಟಿಲ್ಲ. ಶಾಲೆಗೆ ದಾಖಲಾಗುವ ಸಂಬಂಧ ಹಾರಿಕೆಯ ಉತ್ತರಗಳನ್ನ ಕೊಡುತ್ತಿದ್ದಾರೆ. ಹೀಗಾಗಿ, ಆ ಮಕ್ಕಳು ಬೇರೆ ಶಾಲೆಗೆ ಸೇರಿದ್ರಾ ಇಲ್ವಾ ಎಂಬುದರ ಬಗ್ಗೆ ನಮ್ಗೆ ಯಾವುದೇ ಖಚಿತತೆ ಇಲ್ಲ.
ಮುಂದಿನ ದಿನಗಳಲ್ಲಿ ಒಂದು ವೇಳೆ ಬೇರೆ ಶಾಲೆಗೆ ಸೇರಿದ್ದರೆ ದಾಖಲೆಗಳ ಸಮಸ್ಯೆಯಾಗುತ್ತೆ. ಈ ಶಾಲೆಯಲ್ಲೊಂದು ದಾಖಲೆ, ಬೇರೆ ಶಾಲೆಯಲ್ಲೊಂದು ದಾಖಲೆಯಿಂದಾಗಿ ನಕಲಿ ದಾಖಲೆಗಳು ಸೃಷ್ಟಿಯಾಗುತ್ತೆ. ಟಿಸಿ ಕೇಳಲು ಬಂದಾಗ ಯಾವ ವರ್ಷದ್ದು ನೀಡಬೇಕೆಂಬ ಗೊಂದಲವೂ ಶುರುವಾಗುತ್ತೆ ಅಂತಾ ವಿವರಿಸಿದರು.
ಸರ್ಕಾರವೂ ನ್ಯಾಯಾಲಯದ ಕಣ್ಣು ಒರೆಸುವ ಕೆಲಸ ಮಾಡುತ್ತಿದ್ದು, ಸುಳ್ಳು ಮಾಹಿತಿಯ ಲೆಕ್ಕ ಕೊಡಲು ಮುಂದಾಗ್ತಿದೆ. ಮಕ್ಕಳು ನಿರಂತರ ಕಲಿಕೆಯಲ್ಲಿ ಭಾಗವಹಿಸದೇ ಇದ್ದರೂ, ಮಕ್ಕಳು ಶಾಲೆಯಲ್ಲೇ ಇದ್ದಾರೆ ಅಂತಾ ಅಂಕಿ-ಅಂಶ ಕೊಟ್ಟು ನಂಬಿಸುತ್ತಿದೆ. ನಮ್ಮಿಂದ ಬಲವಂತವಾಗಿ ಡೇಟಾವನ್ನ ತುಂಬಿಸುತ್ತಿದ್ದು, ಇದನ್ನ ಖಂಡಿಸುತ್ತೇವೆ. ಮಕ್ಕಳು ನಿರಂತರ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದರು.
ಆರ್ಥಿಕ ಸಂಕಷ್ಟದಲ್ಲಿರುವ ನಾವು ಯಾಕೆ ಶುಲ್ಕ ಕಟ್ಟಿ ಅನ್ನಬಾರದು?
ಶುಲ್ಕ ಕಟ್ಟಿ ಅಂತಾ ಪೋಷಕರ ಹತ್ತರ ನಾವು ಯಾಕೆ ಕೇಳಬಾರದು? ಎಸ್ಎಸ್ಎಲ್ಸಿ ಎಕ್ಸಾಂ ಹಾಲ್ ಟಿಕೆಟ್ ಕೊಡಿ ಅಂತೀರಾ, ಯಾವ ನೈತಿಕತೆ ಇಟ್ಟುಕೊಂಡು ಶುಲ್ಕ ಇಲ್ಲದೇ ಪರೀಕ್ಷೆ ಕೊಡಿ ಅಂತೀರಾ ಎಂದು ಶಿಕ್ಷಣ ಇಲಾಖೆಯನ್ನು ಪ್ರಶ್ನಿಸಿದ್ರು.
ಖಾಸಗಿ ಶಾಲೆಗಳು ಸಾಲಬಾಧೆಯಿಂದ ನರಳುತ್ತಿವೆ. ಯಾವ ಸರ್ಕಾರವೂ, ಬ್ಯಾಂಕುಗಳು ಸಾಲಕ್ಕೆ ರಿಯಾಯಿತಿ, ಸಮಯಾವಕಾಶ ಕೊಟ್ಟಿಲ್ಲ. ಈಗಾಗಲೇ 78ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಅನೇಕ ರಾಜ್ಯದಲ್ಲಿ ಶುಲ್ಕದ ಬಗ್ಗೆ ಸ್ಪಷ್ಟತೆ ಇದೆ. ಆದರೆ, ನಮ್ಮ ರಾಜ್ಯದಲ್ಲಿ ಇಲ್ಲದೇ ಇರುವುದನ್ನು ಗಮನಿಸಬಹುದು ಎಂದ್ರು.
ಇನ್ನು, ಕ್ಯಾಮ್ಸ್ ಅಡಿಯಲ್ಲಿ ಸುಮಾರು 3,655 ಶಾಲೆಗಳಿವೆ. ಇದರಲ್ಲಿ 1,50,0000( 15ಲಕ್ಷ)ದಷ್ಟು ವಿದ್ಯಾರ್ಥಿಗಳು ಓದುತ್ತಿದ್ದು ,55,000 ಬೋಧಕರು ಕಾರ್ಯನಿರ್ವಹಿಸುತ್ತಿದ್ದಾರೆ.
2020-21ನೇ ದಾಖಲಾತಿಯಲ್ಲಿ ರಿಯಾಯಿತಿ ನೀಡಿದ ಬಳಿಕ ಪೂರ್ಣ ಪ್ರಮಾಣದಲ್ಲಿ ಶುಲ್ಕ ಕಟ್ಟಿದವರು ಶೇ.45% ಪೋಷಕರು ಹಾಗೂ ಶೇ.17%ರಷ್ಟು ಪೋಷಕರು 75% ರಷ್ಟು ಶುಲ್ಕ ಪಾವತಿ ಮಾಡಿದ್ದಾರೆ. ಅರ್ಧ ಶುಲ್ಕ(50%)ವನ್ನು 17% ನಷ್ಟು ಪೋಷಕರು ಪಾವತಿಸಿದ್ದು, 25 ರಷ್ಟು ಶುಲ್ಕವನ್ನ 17 % ಪೋಷಕರು ಕಟ್ಟಿದ್ದಾರೆ.
ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ದಾಖಲಾತಿ ಕಳೆದ ವರ್ಷವೂ ಆಗಿಲ್ಲ, ಈ ವರ್ಷವೂ ಆಗಿಲ್ಲ. ಕನಿಷ್ಠ ಶುಲ್ಕವನ್ನು ದಾಖಲು ಮಾಡಿಲ್ಲ. ಬ್ಯಾಂಕ್ ಲೋನ್ ಕಟ್ಟದೇ ಆರ್ಥಿಕ ಸಂಕಷ್ಟವನ್ನ ಎದುರಿಸುತ್ತಿದ್ದಾರೆ ಅಂತಾ ತಿಳಿಸಿದರು.