ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿಗಳು ಮತಗಟ್ಟೆಯ ಬಳಿ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಕ್ರಮ ಸಂಖ್ಯೆಯನ್ನು ಅದಲು ಬದಲು ಮಾಡಿ ಎಡವಟ್ಟು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ 1000 ಕೋಟಿ ರೂ.ಗಿಂತ ಅಧಿಕ ಆಸ್ತಿಯನ್ನು ಹೊಂದಿದ ಕೆಲವೇ ಚುನಾವಣಾ ಅಭ್ಯರ್ಥಿಗಳ ಪೈಕಿ ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಅಭ್ಯರ್ಥಿ ಕೆಜಿಎಫ್ ಬಾಬು ಕೂಡ ಒಬ್ಬರು. ಕಾಂಗ್ರೆಸ್‌ನಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಗೆ ಟಾಂಗ್ ಕೊಡಲು ಸಿದ್ಧವಾಗಿದ್ದರು.
ಚುನಾವಣಾ ಅಧಿಕಾರಿಗಳು ಮತಗಟ್ಟೆಯ ಹೊರಭಾಗದಲ್ಲಿ ಅಭ್ಯರ್ಥಿಗಳ ಕ್ರಮಸಂಖ್ಯೆ, ಹೆಸರು, ಚಿಹ್ನೆಯನ್ನು ಗೋಡೆಯ ಮೇಲೆ ಅಂಟಿಸಿದ್ದರು. ಆದರೆ, ಬ್ಯಾಲೆಟ್ ಪೇಪರ್‌ನಲ್ಲಿ ಇರುವ ಕ್ರಮ ಸಂಖ್ಯೆಗೂ ಹಾಗೂ ಗೋಡೆಯ ಮೇಲೆ ಅಂಟಿಸಲಾದ ಕ್ರಮಸಂಖೆಯಲ್ಲಿ ವ್ಯತ್ಯಾಸ ಆಗಿರುವುದು ಕಂಡುಬಂದಿದೆ. ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿರುವುದರಿಂದ ರಾಜ್ಯದ ವಿವಿಧೆಡೆ ಇಂತಹ ಹಲವು ಎಡವಟ್ಟುಗಳು ಆಗಿವೆ.
ಕೆಜಿಎಫ್ ಬಾಬು ಬೆಂಬಲಿಗರಿಂದ ಆಕ್ರೋಶ: ಇದರಿಂದಾಗಿ ಕೆಜಿಎಫ್ ಬಾಬು ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಕೆಜಿಎಫ್ ಬಾಬು ಕ್ರಮ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ ಚುನಾವಣಾ ಆಯೋಗವು ಸ್ಪಷ್ಟನೆ ಕೊಡಲಾಗದೇ ತಪ್ಪು ಒಪ್ಪಿಕೊಂಡಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಕ್ರಮ ಸಂಖ್ಯೆ 12 ಎಂದು ಬ್ಯಾಲೆಟ್ ಪೇಪರ್‌ನಲ್ಲಿದೆ. ಆದರೆ, ಗೋಡೆಯ ಮೇಲೆ ಇರುವ ಮಾಹಿತಿ ಫಲಕದಲ್ಲಿ ಕೆಜಿಎಫ್ ಬಾಬು ಕ್ರಮ ಸಂಖ್ಯೆ 13 ಎಂದು ತಪ್ಪಾಗಿ ದಾಖಲು ಮಾಡಲಾಗಿದೆ ಎಂದು ದೂರಿದ್ದಾರೆ.
ಬೇರೊಬ್ಬರಿಗೆ ಮತ: ಚುನಾವಣಾ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಕ್ರಮಸಂಖ್ಯೆ 12 ಗ್ಯಾಸ್ ಸಿಲಿಂಡರ್ ಗುರುತಿಗೆ ಮತಹಾಕಿ ಎಂದು ಪ್ರಚಾರ ಮಾಡಿಕೊಂಡು ಬರಲಾಗಿದೆ. ಆದರೆ, ಈಗ ಚುನಾವಣಾ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗ ಮತಗಳು ಬೇರೊಬ್ಬರಿಗೆ ಬೀಳುತ್ತಿವೆ ಎಂದು ಕೆಜಿಎಫ್ ಬಾಬು ಬೆಂಬಲಿಗರು ಚುನಾವಣಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಪದ್ಮನಾಭ ನಗರದಲ್ಲಿ ಮತಗಟ್ಟೆ ಎದುರೇ ಮಾರಾಮಾರಿ.. ಕೈ ಕಾರ್ಯಕರ್ತರ ಮೇಲೆ ಪುಂಡರ ಗ್ಯಾಂಗ್ನಿಂದ ಹಲ್ಲೆ