ಬೆಂಗಳೂರು: ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಸಹಜವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆ ಮೆಡಿಕಲ್ ಬುಲೆಟಿನ್ ಬಿಡುಗಡೆ ಮಾಡಿದೆ.
ಆಸ್ಪತ್ರೆಗೆ ದಾಖಲಾಗಿ 5ನೇ ದಿನವಾದ ಇಂದು ಕೂಡ ಮುಖ್ಯಮಂತ್ರಿಗಳ ಆರೋಗ್ಯ ಸ್ಥಿರವಾಗಿದೆ. ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ತಮ್ಮ ಕೊಠಡಿಯಿಂದಲೇ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಸಹಜವಾಗಿ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಸಿಎಂ ಆರೋಗ್ಯದ ಬಗ್ಗೆ ತಜ್ಞ ವೈದ್ಯರ ತಂಡ ನಿರಂತರವಾಗಿ ನಿಗಾವಹಿಸಿದ್ದು, ರೋಗ ಲಕ್ಷಣರಹಿತ ಕೊರೊನಾ ಪಾಸಿಟಿವ್ನಿಂದಾಗಿ ಆಗಸ್ಟ್ 2ರ ರಾತ್ರಿ ಮಣಿಪಾಲ್ ಆಸ್ಪತ್ರೆಗೆ ಬಿಎಸ್ವೈ ದಾಖಲಾಗಿದ್ದರು. ಸದ್ಯ ಆಸ್ಪತ್ರೆಯಿಂದಲೇ ಆಡಳಿತ ನಿರ್ವಹಣೆ ಮಾಡುತ್ತಿದ್ದು, ಇಂದು ಕೂಡ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆಗೆ ದೂರವಾಣಿ ಮೂಲಕ ಸಭೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿದ್ದಾರೆ.