ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಮಾರ್ಷಲ್ ಕೆಲಸ ಕೊಡಿಸುವುದಾಗಿ ನಂಬಿಸಿ, ನಕಲಿ ನೇಮಕಾತಿ ಪತ್ರ ನೀಡಿ ನೂರಾರು ಉದ್ಯೋಗಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಅರೋಪದಡಿ ನಕಲಿ ಬಿಬಿಎಂಪಿ ನೌಕರನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆ.ಪಿ.ನಗರದ ನಿವಾಸಿ ಹರ್ಷ (23) ಎಂಬ ಬಂಧಿತ ಆರೋಪಿ. ವಂಚನೆಗೊಳಗಾದ ಸಂದೀಪ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.
ಮೂಲತಃ ಹೊಸಕೋಟೆಯ ಲಕ್ಕೊಂಡನಹಳ್ಳಿಯ ನಿವಾಸಿಯಾಗಿರುವ ಹರ್ಷ, ಜೆ.ಪಿ.ನಗರದಲ್ಲಿ ವಾಸವಾಗಿದ್ದನು. ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದ ಈತ, ಕೊರೊನಾ ಸಮಯದಲ್ಲಿ ಬಿಬಿಎಂಪಿ ಕಚೇರಿಯ ವಾರ್‌ರೂಮ್‌ನಲ್ಲಿ ಡೇಟಾ ಎಂಟ್ರಿಯಾಗಿ ಕೆಲಸ ಮಾಡುತ್ತಿದ್ದನು. ಇದಕ್ಕಾಗಿ ಪಾಲಿಕೆಯಿಂದ ಐಡಿ ಕಾರ್ಡ್ ಮಾಡಿಸಿಕೊಂಡಿದ್ದನು.
ಮಾರ್ಷಲ್ ನೌಕರಿಯ ಆಮಿಷ: ಬಿಬಿಎಂಪಿಯಲ್ಲಿ ಮಾರ್ಷಲ್ ನೌಕರಿಗೆ ಬೇಡಿಕೆ ಇರುವುದನ್ನು ಮನಗಂಡು ಉದ್ಯೋಗಾಕಾಂಕ್ಷಿಗಳಿಗೆ ಬಲೆ ಬೀಸಿದ್ದಾನೆ. ತಾನು ಬಿಬಿಎಂಪಿ ನೌಕರನಾಗಿದ್ದು, ಹಣ ಕೊಟ್ಟರೆ ನೇರ ನೇಮಕಾತಿ ಮಾಡಿಸುವುದಾಗಿ ಹೇಳಿದ್ದಾನೆ. ಇದಕ್ಕೆ ಪ್ರತಿಯಾಗಿ ಫೋನ್ ಪೇ ಮೂಲಕ 3 ಸಾವಿರ ರೂ ಪಾವತಿಸಿಕೊಂಡಿದ್ದನು.
6 ಲಕ್ಷಕ್ಕೂ ಹೆಚ್ಚು ಹಣ ವಂಚನೆ: ಇದೇ ರೀತಿ 200ಕ್ಕೂ ಹೆಚ್ಚು ಜನರಿಂದ 6 ಲಕ್ಷ ರೂ.ಗೂ ಹೆಚ್ಚು ಹಣ ವಂಚಿಸಿದ್ದಾನೆ. ಆರೋಪಿ ಹಣ ಪಡೆದುಕೊಂಡ ಬಳಿಕ ಬಿಬಿಎಂಪಿ ಲೋಗೊವನ್ನು ಗೂಗಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ನಕಲಿ ನೇಮಕಾತಿ ಆದೇಶ ಪ್ರತಿಯನ್ನು ಉದ್ಯೋಗಾಂಕ್ಷಿಗಳ ವಾಟ್ಸ್‌ಆ್ಯಪ್ ಖಾತೆಗಳಿಗೆ ಕಳುಹಿಸುತ್ತಿದ್ದ. ಅಸಲಿ ನೇಮಕಾತಿ ಆದೇಶ ಪತ್ರವೆಂದು ಭಾವಿಸಿ ಬಿಬಿಎಂಪಿ ಕಚೇರಿಗೆ ಹೋದಾಗ ಆರೋಪಿ ವಂಚನೆ ಎಸಗಿರುವುದು ಗೊತ್ತಾಗಿದೆ. ಹಲಸೂರು ಗೇಟ್ ಠಾಣೆ ಇನ್‌ಸ್ಪೆಕ್ಟರ್ ಹನುಮಂತ್ರ ಭಜಂತ್ರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಕೆಲವು ವರ್ಷಗಳಿಂದ ಮಾರ್ಷಲ್ ಕೆಲಸ ಕೊಡಿಸುವುದಾಗಿ ಉದ್ಯೋಗಾಕಾಂಕ್ಷಿಗಳಿಗೆ ವಂಚಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪಿ ಹಣವನ್ನು ಗರ್ಲ್‌ಫ್ರೆಂಡ್‌ಗೆ ಖರ್ಚು ಮಾಡಿದ್ದಾನೆ. ಇದುವರೆಗೂ ಸುಮಾರು 6 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ್ದು, ಹಣವನ್ನು ಪ್ರಿಯತಮೆಗೆ ನೀಡಿರುವುದಾಗಿ ಪೊಲೀಸ್ ವಿಚಾರಣೆಯಲ್ಲಿ ಹೇಳಿದ್ದಾನೆ. ಸದ್ಯ ಆರೋಪಿಯಿಂದ ನಕಲಿ ನೇಮಕಾತಿ ಪತ್ರಗಳು, ಪೋನ್ ಪೇ ಮಾಡಿ ಹಣ ಪಡೆದಿರುವ ಬಗ್ಗೆ ಮೊಬೈಲ್ ಸ್ಕ್ರಿನ್ ಶಾಟ್ ಪ್ರತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂಓದಿ: ಬೆಂಗಳೂರು: ಅಂಗಡಿ ಮಾಲೀಕನಿಗೆ ಸುಳ್ಳು ಹೇಳಿ 1 ಕೆ.ಜಿಗೂ ಹೆಚ್ಚು ಚಿನ್ನ ದೋಚಿದ್ದ ಸೇಲ್ಸ್‌ಮ್ಯಾನ್ ಸೆರೆ