ಬೆಂಗಳೂರು: ನ್ಯಾಯಾಲಯದ ಸಿಬ್ಬಂದಿ ಸೋಗಿನಲ್ಲಿ ಮನೆಗೆ ನುಗ್ಗಿ ಹಣಕಾಸಿನ ವಿಚಾರವಾಗಿ ಬೆದರಿಕೆ ಹಾಕಿರುವ ಆರೋಪದಡಿ ಮಂಡ್ಯ ಸಂಸದೆ ಸುಮಲತಾ ಸಹೋದರಿ ನೀಡಿದ ದೂರಿನ ಮೇರೆಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಸದೆ ಸುಮಲತಾ ಸಹೋದರಿ ರೇಣುಕಾದೇವಿ ನೀಡಿದ ದೂರಿನ ಮೇರೆಗೆ ವಿಶಾಲಾಕ್ಷಿ ಭಟ್ ಸೇರಿ ಮೂವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ನ.30ರಂದು ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೇಣುಕಾ ಮನೆಗೆ ವಿಶಾಲಾಕ್ಷಿ ಹಾಗೂ ಇಬ್ಬರು ಪುರುಷರು ಮನೆಗೆ ಹೋಗಿದ್ದಾರೆ. ಕೋರ್ಟಿನ ಅಮೀನರು (ಸಿಬ್ಬಂದಿ) ಎಂದು ಹೇಳಿಕೊಂಡು ಪರಿಚಯಿಸಿಕೊಂಡಿದ್ದಾರೆ.
ಈ ವೇಳೆ, ರೇಣುಕಾರ ಬಳಿ ಖಾಲಿ ಹಾಳೆಗೆ ಸಹಿ ಹಾಕಿಸಿಕೊಳ್ಳಲು ಯತ್ನಿಸಿದ್ದಾರೆ. ಅನುಮಾನಗೊಂಡು ರೇಣುಕಾ ಐಡಿ ಕಾರ್ಡ್ ತೋರಿಸುವಂತೆ ಹೇಳುತ್ತಿದ್ದಂತೆ ಆರೋಪಿಗಳು ಕಾಲ್ಕಿತ್ತಿದ್ದಾರೆ. ಈ ಸಂಬಂಧ ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಶಾಲಕ್ಷ್ಮಿ ಭಟ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ವಿಶಾಲಕ್ಷ್ಮಿ ಭಟ್ ವಿರುದ್ಧ ವಂಚನೆ ಆರೋಪದಡಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಲಗ್ಗೆ ಹಾಕಿದ ರೂಪಾಂತರಿ: ಕರ್ನಾಟಕದಲ್ಲಿ ಎರಡು ಒಮಿಕ್ರೋನ್ ಕೇಸ್ ಪತ್ತೆ