ಬೆಂಗಳೂರು: ರಾಜ್ಯದಲ್ಲಿ ಎಸ್ಟಿಡಿ ಫೋನ್ ಬೂತ್ ಮಾದರಿಯಂತೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ಗಳನ್ನು ಪ್ರಾರಂಭ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದ್ದಾರೆ.
300 ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳು ರಸ್ತೆಗೆ ಇಳಿಯಲಿದ್ದು, ಬೆಂಗಳೂರು ನಗರ ಮತ್ತು ರಾಜ್ಯಾದ್ಯಂತ ವಿದ್ಯುತ್ ಚಾಲಿತ ಖಾಸಗಿ ಮತ್ತು ಸಾರ್ವಜನಿಕ ವಾಹನಗಳ ಸಂಖ್ಯೆ ಏರಲಿದೆ. ಇದಕ್ಕೆ ವಿದ್ಯುತ್ ಚಾರ್ಜಿಂಗ್ ಪಾಯಿಂಟ್ಗಳು ಅತ್ಯಗತ್ಯ. ಹೀಗಾಗಿ ರಾಜ್ಯ ಸರ್ಕಾರ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಸೌಲಭ್ಯವನ್ನು ಸಾಮಾನ್ಯ ಜನರಿಗೆ ಸುಲಭವಾಗಿ ದೊರೆಯುವ ಉದ್ದೇಶದಿಂದ ಈ ನಿರ್ಧಾರಕ್ಕೆ ಮುಂದಾಗಿದೆ.
ಲೈಸೆನ್ಸ್ ಹೇಗೆ ಪಡೆಯುವುದು? ಚಾರ್ಜಿಂಗ್ ದರ ದುಬಾರಿಯಾಗುತ್ತಾ?:
ವಿದ್ಯುತ್ ವಾಹನ ಚಲಿಸಬೇಕಾದರೆ ವಿದ್ಯುತ್ ಅತ್ಯಗತ್ಯ. ಅಂತರ್ದಹನ ವಾಹನಕ್ಕೆ 5 ನಿಮಿಷದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಿದ ಹಾಗೆ ವಿದ್ಯುತ್ ವಾಹನ ಚಾರ್ಜ್ ಮಾಡಲು ಸಾಧ್ಯವಿಲ್ಲ. ಬೆಸ್ಕಾಂ ಸಹಭಾಗಿತ್ವದಲ್ಲಿ ಸರ್ಕಾರ 1000 ಚಾರ್ಜಿಂಗ್ ಸ್ಟೇಷನ್ ಪ್ರಾರಂಭಿಸಲು ಮುಂದಾಗಿದ್ದು, ಸಾಮಾನ್ಯ ವಿದ್ಯುತ್ ದರಕ್ಕಿಂತ ಇಲ್ಲಿನ ವಿದ್ಯುತ್ ದರ ಕಡಿಮೆ ಇರುತ್ತದೆ ಎಂದು ಗೌರವ್ ಗುಪ್ತ ತಿಳಿಸಿದ್ದಾರೆ.
ಈ ವೇಳೆ ಲೈಸೆನ್ಸ್ ಪಡೆಯುವ ಬಗ್ಗೆ ಮಾತನಾಡಿದ ಅವರು, ಇತ್ತೀಚಿಗೆ ಕೇಂದ್ರ ಸರ್ಕಾರ ಲೈಸೆನ್ಸ್ ಪಡೆಯುವ ಕಾನೂನು ತಂದಿದೆ. ಆ ಕಾನೂನನ್ನು ರಾಜ್ಯದಲ್ಲಿ ಅಳವಡಿಸಿಕೊಂಡು ಕಾರ್ಯರೂಪಕ್ಕೆ ತರುವ ಬಗ್ಗೆ ಸರ್ಕಾರ ಈಗಾಗಲೇ ಚರ್ಚೆ ನಡೆಸುತ್ತಿದೆ. ಇದರ ಜೊತೆಗೆ ಖಾಸಗಿ ಸಂಸ್ಥೆ ಹಾಗೂ ಉದ್ಯಮಿಗಳ ಸಲಹೆ ಪಡೆಯಲಾಗುವುದು ಎಂದರು.