ಬೆಂಗಳೂರು: ಆರ್ಎಸ್ಎಸ್ ಮುಖಂಡ ಎಂದು ಹೇಳಿಕೊಂಡು ಹಲವರಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ವಂಚಕ ಯುವರಾಜ್ ಅಲಿಯಾಸ್ ಸ್ವಾಮಿ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಒಟ್ಟು ಮೂರು ಎಫ್ಐಆರ್ ಸಂಬಂಧ ಚಾರ್ಜ್ ಶೀಟ್ ಸಲ್ಲಿಸಿರುವ ಸಿಸಿಬಿ:
ಮೊದಲ ಪ್ರಕರಣ:
ನರಸಿಂಹ ಮೂರ್ತಿ ಎಂಬುವವರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನಲ್ಲಿ ಎಇಇ ಹುದ್ದೆ ಕೊಡಿಸುವುದಾಗಿ ಲಕ್ಷಾಂತರ ಹಣ ಪಡೆದು ವಂಚನೆ ನೆಡೆಸಿದ್ದಾನೆ ಎಂದು ಉಲ್ಲೇಖಿಸಲಾಗಿತ್ತು.
ತನ್ನ ಮಗ ರವೀಂದ್ರನಿಗೆ ಎಇಇ ಹುದ್ದೆಗಾಗಿ 75 ಲಕ್ಷಕ್ಕೆ ಡೀಲ್ ಮಾಡಿದ್ದ ಯುವರಾಜ್, 30 ಲಕ್ಷ ರೂ. ಹಣ ಪಡೆದು ಕೆಲಸಕೊಡಿಸದೇ, ಹಣವನ್ನೂ ಹಿಂದಿರುಗಿಸದೆ ಮೋಸ ಮಾಡಿದ್ದ. ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದ. ಕೊಟ್ಟ ಹಣದಿಂದಲೇ ನಿನಗೆ ಸುಪಾರಿ ಕೊಡುತ್ತೇನೆಂದು ಬೆದರಿಕೆ ಹಾಕಿದ್ದ ಎಂದು ದೂರು ದಾಖಲಾಗಿತ್ತು.
ಈ ಸಂಬಂಧ 9 ಮಂದಿ ಸಾಕ್ಷಿಗಳ ಸಮೇತ ಪೊಲೀಸರು, ಯುವರಾಜ್ ಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 420, 504, 506 ಅಡಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪೊಲೀಸರ ಮುಂದೆ ಮಾಡಿದ ಕೃತ್ಯವನ್ನ ಸ್ವಾಮಿ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಎರಡನೇ ಪ್ರಕರಣ:
ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ಡ್ರೈವರ್ ಉಮೇಶ್ ದೂರು ನೀಡಿದ್ದ. ತನ್ನ ಬಳಿ ಕೆಲಸ ಮಾಡುತ್ತಿದ್ದ ಡ್ರೈವರ್ಗೆ ವಂಚಿಸಿದ್ದ ಯುವರಾಜ್ ಕೆಲಸಗಾರನ ಬ್ಯಾಂಕ್ ಅಕೌಂಟ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದನು. ತಾನು ವಂಚಿಸಿ ಪಡೆದ ಹಣವನ್ನು ಡೆಪಾಸಿಟ್ ಮಾಡಿದ್ದ. ಐಟಿ ಇಲಾಖೆಯಿಂದ ಬಂದ ನೊಟೀಸ್ ನೋಡಿ ಡ್ರೈವರ್ ಗಾಬರಿಯಾಗಿದ್ದ. ಯುವರಾಜ್ನನ್ನು ಉಮೇಶ್ ಪ್ರಶ್ನೆ ಮಾಡಿದಾಗ ಬಡಿದು ಮನೆಯಿಂದ ಆಚೆ ಹಾಕಿದ್ದ ಎಂದು ದೂರಲಾಗಿತ್ತು.
2016 ರಿಂದಲೂ ಡ್ರೈವರ್ ಆಗಿದ್ದ ಉಮೇಶ್ ಅಕೌಂಟ್ ದುರ್ಬಳಕೆ ಮಾಡಿಕೊಂಡಿದ್ದ ಯುವರಾಜ್ ಸ್ವಾಮಿ , ತಾನೇ ಕರ್ನಾಟಕ ಬ್ಯಾಂಕ್ನಲ್ಲಿ ಅಕೌಂಟ್ ತೆರೆಯಲು ಹೇಳಿದ್ದ. ಉಮೇಶನ ಅಕೌಂಟ್ನಲ್ಲಿ ಕೋಟಿಗಟ್ಟಲೆ ವ್ಯವಹಾರ ನಡೆಸಿದ್ದ. ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ನಿಂದ ನೊಟೀಸ್ ಕಂಡು ಉಮೇಶ್ ಗಾಬರಿಯಾಗಿದ್ದನು. ಪ್ರಶ್ನಿಸಿದ್ದಕ್ಕೆ ಯುವರಾಜ್, ಪತ್ನಿ ಪ್ರೇಮಾ ಹಲ್ಲೆ ಮಾಡಿ ಮನೆಯಾಚೆ ಹಾಕಿದರು ಎಂದು ದೂರು ನೀಡಿದ್ದನು.
ಮೂರನೇ ಪ್ರಕರಣ:
ಸೈಬರ್ ಠಾಣೆಗೆ ಉದ್ಯಮಿ ಸುಧೀಂದ್ರ ರೆಡ್ಡಿ ನೀಡಿದ್ದ ದೂರಿನಲ್ಲಿ ಕೆಎಸ್ಆರ್ಟಿಸಿ ಚೇರ್ಮನ್ ಹುದ್ದೆ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ್ದ. ರೈತ ಮತ್ತು ಉದ್ಯಮಿಯಾದ ಸುಧೀಂದ್ರ ರೆಡ್ಡಿಯಿಂದ 1 ಕೋಟಿ ರೂ. ತೆಗೆದುಕೊಂಡು ಮೋಸ ಮಾಡಿದ್ದ. ಬಿಜೆಪಿ ಕಾರ್ಯಕರ್ತ ಮಧುರಾಜ್ ಎಂಬಾತನ ಜೊತೆ ಕೃತ್ಯ ಎಸಗಿದ್ದನು. ಈ ಸಂಬಂಧ ಯುವರಾಜ್ ಮತ್ತು ಮಧುರಾಜ್ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದರು.
ಯುವರಾಜ್ ಮನೆ ಮೇಲೆ ದಾಳಿ:
ಮೂರೂ ಪ್ರಕರಣಗಳ ಸಂಬಂಧ ಪೊಲೀಸರು ಯುವರಾಜ್ ಮನೆ ಮೇಲೆ ದಾಳಿ ನೆಡೆಸಿ ಬರೋಬ್ಬರಿ 89ಕ್ಕೂ ಹೆಚ್ಚು ದಾಖಲೆಗಳನ್ನು ಸೀಜ್ ಮಾಡಿದ್ದರು. ಯುವರಾಜ್ನ ವೈಯಕ್ತಿಕ ಬ್ಯಾಂಕ್ ವಿವರ ಮತ್ತು ಆಸ್ತಿ ಸಂಬಂಧಿಸಿದ ದಾಖಲೆಗಳು, ಅನೇಕ ಗಣ್ಯರಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ವಶಕ್ಕೆ ಪಡೆದಿದ್ದರು.
ಕೋರ್ಟ್ಗೆ ಸಲ್ಲಿಸಿರುವ ಪ್ರಮುಖ ದಾಖಲೆಗಳು :
ಸಚಿವ ಮುರುಗೇಶ್ ನಿರಾಣಿ, ಪ್ರಮೋದ್ ಮಧ್ವರಾಜ್, ಉಮೇಶ್ ಕತ್ತಿ ಲೆಟರ್ ಹೆಡ್ ಮತ್ತು ಬಯೋಡೆಟಾ, ಮುತ್ತಪ್ಪ ರೈಗೆ ಸೆಕ್ಯೂರಿಟಿ ಕೋರಿ ಶ್ರೀರಾಮುಲು ಹೆಸರಿನಲ್ಲಿ ಪತ್ರ, ಶ್ರೀರಾಮುಲು ಲೆಟರ್ ಹೆಡ್ನಲ್ಲಿ ಗೃಹ ಇಲಾಖೆಗೆ ಬರೆದಿರುವ ಲೆಟರ್, ಬಿಜೆಪಿ ಪಕ್ಷದ ಅನೇಕ ಲೆಟರ್ ಹೆಡ್ ಸಮೇತ ಪತ್ರಗಳು, ಉಪಚುನಾವಣೆಗೆ ವಸಂತ್ ಬೆಳವಾಯಿ ಟಿಕೆಟ್ ಕೋರಿಕೆ ಪತ್ರ, ಟಿ ಶ್ಯಾಮ್ ಭಟ್ ವೈಯಕ್ತಿಕ ಸೇವಾ ವಿವರ ಇರುವ ದಾಖಲೆಗಳು, ನಿವೃತ್ತ ಜಡ್ಜ್ ಇಂದ್ರಕಲಾ ಪರ್ಸನಲ್ ಪ್ರೊಫೈಲ್ಗಳನ್ನು ಚಾರ್ಜ್ಶೀಟ್ ಜೊತೆಗೆ ಪ್ರಮುಖ ದಾಖಲೆಗಳನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಓದಿ: ಇಂದಿರಾ ಕ್ಯಾಂಟಿನ್ಗೆ ಅನ್ನಪೂರ್ಣೇಶ್ವರಿ ಹೆಸರು ಇಡುವುದರಿಂದ ಕಾಂಗ್ರೆಸ್ಗೇನು ಸಮಸ್ಯೆ: ಕೇಂದ್ರ ಸಚಿವ ಖೂಬಾ