ಬೆಂಗಳೂರು: ಯಶವಂತಪುರ ಉಪಸಮರದ ಗೆಲುವಿಗಾಗಿ ಕಮಲ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಇಂದು ವಿದ್ಯಾನಗರದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿರುವ ಚಂಡಿಕಾಹೋಮದಲ್ಲಿ ಪಾಲ್ಗೊಂಡರು. ಚಂಡಿಕಾಹೋಮದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ, ಸಂಸದೆ ಶೋಭಾ ಕರಂದ್ಲಾಜೆ ಭಾಗಿಯಾಗಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ಉಪಚುನಾವಣೆ ಬಂದಿರೋದಕ್ಕೆ ಕಾರಣ ಏನು ಎಂಬುದು ಎಲ್ಲರಿಗೂ ಗೊತ್ತು. ಕಳೆದ 14 ತಿಂಗಳ ಕಾಲ ಸಮ್ಮಿಶ್ರ ಸರ್ಕಾರವಿತ್ತು. ಚುನಾವಣಾ ಫಲಿತಾಂಶ ಬಂದ ಅರ್ಧ ಗಂಟೆಯಲ್ಲಿ ಅವಸರವಸರವಾಗಿ ಸರ್ಕಾರ ರಚನೆ ಮಾಡಿದ್ದರು. ಆದರೆ, ಆ ಸರ್ಕಾರದ ಆಡಳಿತದಲ್ಲಿ ಯಾವ ಸ್ಪಷ್ಟತೆಯೂ ಇರಲಿಲ್ಲ. ಜನರಿಗೆ ನಿರಾಸೆಯಾಯಿತು. ಜನರ ಕಷ್ಟ ಸುಖಗಳಿಗೆ ಅವರು ಸ್ಪಂದಿಸಲಿಲ್ಲ. ಜನರ ಮನಸ್ಸಿನಲ್ಲಿ ಕುದಿಯುತ್ತಿದ್ದ ಭಾವನೆಗಳಿಗೆ ಎಸ್ ಟಿ ಸೋಮಶೇಖರ್ ಮತ್ತು ಮುನಿರತ್ನ ಸ್ಪಷ್ಟ ರೂಪ ಕೊಟ್ಟರು. ಆದ್ದರಿಂದ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರುವಂತಾಯ್ತು ಎಂದರು.