ಬೆಂಗಳೂರು : ಕೊರೊನಾ ಆರ್ಭಟಕ್ಕೆ ಅದೆಷ್ಟೊ ಮಂದಿ ತತ್ತರಿಸಿ ಹೋಗಿದ್ದಾರೆ. ಒಂದೆಡೆ ಸೋಂಕಿತರು ಸರಿಯಾದ ಚಿಕಿತ್ಸೆ ಸಿಗದೆ ನೋವು ಅನುಭಸುತ್ತಿದ್ದರೆ, ಇನ್ನೊಂದೆಡೆ ಲಾಕ್‌ಡೌನ್‌ನಿಂದಾಗಿ ಬೀದಿ ವ್ಯಾಪಾರಿಗಳು, ದಿನಕೂಲಿ ಕಾರ್ಮಿಕರು ಹೊತ್ತಿನ ಊಟಕ್ಕೆ ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ.
ಮೊದಲ ಬಾರಿ ಲಾಕ್‌ಡೌನ್ ಘೋಷಿಸಿದ್ದಾಗ ಅದೆಷ್ಟೋ ಮಂದಿ ಮುಂದೆ ಬಂದು ಬಡವರಿಗೆ, ನಿರ್ಗತಿಕರಿಗೆ ಸಹಾಯ ಹಸ್ತ ನೀಡಿದ್ದರು. ಲಾಕ್‌ಡೌನ್‌ನಲ್ಲಿ ಅನಾವಶ್ಯಕವಾಗಿ ರಸ್ತೆಗಿಳಿಯುತ್ತಿದ್ದವರ ಮೇಲೆ ಕಣ್ಣಿಡುತ್ತಿದ್ದ ಖಾಕಿ ಪಡೆ ಇದೀಗ 2ನೇ ಲಾಕ್‌ಡೌನ್‌ನಲ್ಲಿ ನಿರ್ಗತಿಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಚಾಮರಾಜಪೇಟೆ ಪೊಲೀಸ್ ಠಾಣೆ ಸಿಬ್ಬಂದಿ ಸಮಾಜಮುಖಿ ಕೆಲಸ ಮಾಡಲು ಮುಂದಾಗಿದ್ದಾರೆ. ಲಾಕ್‌ಡೌನ್ ವೇಳೆ ಊಟ ಸಿಗದೆ ಹಸಿವಿನಿಂದ ಪರದಾಡುತ್ತಿದ್ದವರಿಗೆ ಆಹಾರ ವಿತರಿಸುತ್ತಿದ್ದಾರೆ. ಸಿಸಿಬಿ ಜಂಕ್ಷನ್ ಬಳಿ ತರಕಾರಿ ವ್ಯಾಪಾರಿಗಳಿಗೆ ಆಹಾರ ವಿತರಿಸುವ ಮೂಲಕ ಪೊಲೀಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.