ಬೆಂಗಳೂರು : ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಜಾಮೀನಿನ ಮೇರೆ ಹೊರಗಿರುವ ಹಿಂದೂಪರ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಶೀಟ್ ತೆರೆಯಲು ಚಾಮರಾಜಪೇಟೆ ಪೊಲೀಸರು ಸಿದ್ದತೆ ನಡೆಸಿದ್ದಾರೆ. ಚಾಮರಾಜಪೇಟೆ, ರಾಮನಗರ ಹಾಗೂ ವಿಜಯನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪುನೀತ್ ವಿರುದ್ಧ ಗಲಭೆ, ದೊಂಬಿ, ಕೊಲೆ ಬೆದರಿಕೆ ಹಾಗೂ ಹಲ್ಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಶೀಟ್ ತೆರೆಯಲು ತನ್ನ ವ್ಯಾಪ್ತಿಯ ಎಸಿಪಿ ಅವರಿಗೆ ವರದಿ ಸಲ್ಲಿಸಲಾಗಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಚಿಕ್ಕಪೇಟೆ ಉಪವಿಭಾಗ ಎಸಿಪಿಯವರು ಕೆರೆಹಳ್ಳಿಗೆ ನೊಟೀಸ್ ಜಾರಿ ಮಾಡಿದ್ದಾರೆ. ದೊಂಬಿ, ಕೊಲೆ, ಹಲ್ಲೆ, ಜೀವ ಬೆದರಿಕೆ ಹಾಗೂ ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ನಿಮ್ಮ ವಿರುದ್ಧ ಏಕೆ ರೌಡಿಪಟ್ಟಿ ತೆರೆಯಬಾರದು ಎಂಬುದಕ್ಕೆ ಕೂಡಲೇ ವಿವರಣೆ ಸಲ್ಲಿಸಬಹುದು. ವಿವರಣ ನೀಡದಿದ್ದಲ್ಲಿ ಏನು ಇಲ್ಲವೆಂದು ಪರಿಗಣಿಸಿ ರೌಡಿಪಟ್ಟಿ ತೆರೆಯಲಾಗುವುದು ಎಂದು ಪುನೀತ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಜಾಮೀನಿನ ಮೇಲೆ ಹೊರಗಿರುವ ಪುನೀತ್ ಕೆರೆಹಳ್ಳಿ : ಗೋಸಾಗಣೆ ಆರೋಪದಲ್ಲಿ ಇದ್ರೀಶ್ ಪಾಷಾ ಎಂಬವರು ಅನುಮಾನಾಸ್ಪದ ರೀತಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ ಹಾಗೂ ಇತರೆ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆರೋಪಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ನೇತೃತ್ವದ ರಜಾಕಾಲದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿತ್ತು.
ಆರೋಪಿಗಳಾದ ಪುನೀತ್ ಕೆರೆಹಳ್ಳಿ, ಗೋಪಿ, ಸುರೇಶ್, ಪವನ್ ಕುಮಾರ್, ಎ.ಎನ್.ಪಿ ಲಿಂಗಪ್ಪ ಎಂಬುವವರಿಗೆ ಜಾಮೀನು ಮಂಜೂರು ಮಾಡಿ ನ್ಯಾಯಾಲಯ ಆದೇಶಿಸಿತ್ತು. ವಿಚಾರಣೆ ವೇಳೆ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ ಶ್ಯಾಮ್, ಮರಣೋತ್ತರ ಪರೀಕ್ಷೆಯಲ್ಲಿ ಇದ್ರೀಶ್ ಪಾಷಾ ಅವರ ದೇಹದಲ್ಲಿ ತರಚಿದ ಗಾಯಗಳ ಬಗ್ಗೆ ಮಾತ್ರ ಉಲ್ಲೇಖವಾಗಿದ್ದು, ಗಂಭೀರ ಗಾಯಗಳ ಬಗ್ಗೆ ಏನೂ ಮಾಹಿತಿ ಇಲ್ಲ ಎಂದು ಹೇಳಿದ್ದರು.
ಕಳೆದ ಮಾರ್ಚ್ 31ರಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಬಳಿ ಅಕ್ರಮ ಜಾನುವಾರು ಸಾಗಾಣಿಕೆ ನಡೆಯುತ್ತಿದ್ದ ವೇಳೆ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರು ಕ್ಯಾಂಟರ್ ತಡೆದು ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ರಕ್ಷಣೆ ಮಾಡಿದ್ದರು. ನಂತರ ಕ್ಯಾಂಟರ್ ಡ್ರೈವರ್ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಮೃತನನ್ನು ಮಂಡ್ಯ ಮೂಲದ ಇದ್ರಿಷ್ ಪಾಷಾ ಎಂದು ಗುರುತಿಸಲಾಗಿತ್ತು. ಇದೊಂದು ಕೊಲೆ ಎಂದು ಇದ್ರೀಸ್ ಪಾಷ ಕುಟುಂಬಸ್ಥರು ಆರೋಪಿಸಿ ದೂರು ನೀಡಿದ್ದರು. ಅಲ್ಲದೆ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ : ಗೋಸಾಗಣೆ ವೇಳೆ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣ : ಪುನೀತ್ ಕೆರೆಹಳ್ಳಿ ಸೇರಿ ನಾಲ್ವರಿಗೆ ಜಾಮೀನು