ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯ ಲಂಚ-ಮಂಚ ಹೇಳಿಕೆಗೆ ವಿಧನಾಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಹೇಳಿಕೆ, ಇಡೀ ಮಾನವ ಕುಲ ತಲೆತಗ್ಗಿಸುವಂತೆ ಮಾಡಿದೆ. ಸರ್ಕಾರಿ ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳ ಬಗ್ಗೆ ಹೀಗೆ ಹೇಳಿದರೆ, ಜನ ಏನು ಮಾತಾಡ್ತಾರೆ ಅನ್ನೋದರ ಬಗ್ಗೆ ಯೋಚಿಸಲಿ. ಇವರಿಗೆಲ್ಲ ಪ್ರಚಾರದ ಗೀಳು. ಪೇಪರ್‌ನಲ್ಲಿ ಬರಬೇಕು ಅಂತ ಹೀಗೆ ದಿನಕ್ಕೊಂದು ಸ್ಟೇಟ್ಮೆಂಟ್ ಕೊಡ್ತಿದ್ದಾರೆ ಎಂದು ಕಿಡಿಕಾರಿದರು.
ಇದು ಇಡೀ ಕಾಂಗ್ರೆಸ್ ಪಕ್ಷಕ್ಕೆ ಕಳಂಕ. ಖರ್ಗೆ ಕುಟುಂಬಕ್ಕೆ ಕೂಡ ಕಳಂಕ ತಂದಿದ್ದಾರೆ ಎಂದು ಕಿಡಿಕಾರಿದರು. ಕಾಲಿಗೆ ಚಪ್ಪಲಿ ಹಾಕ್ತೀವಿ, ಹೊಲಸು ಕೂಡ ಕಾಲಿಗೆ ತಾಗಬಾರದು ಅಂತ. ಆದ್ರೆ ನೀವು ನಾಲಿಗೆಯಲ್ಲೇ ಹೊಲಸು ತುಂಬಿಕೊಂಡಿದ್ದೀರಿ. ಅವರ ಕುಟುಂಬಸ್ಥರು ಕೂಡ ಈ ಹೇಳಿಕೆಗೆ ಕಳವಳ ವ್ಯಕ್ತಪಡಿಸಿದ್ದಾರೆ ಅಂತ ಭಾವಿಸಿದ್ದೇನೆ ಎಂದರು.
ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ ಹಣ ಸಿಕ್ಕಿತ್ತು, ಅದನ್ನ ಬಚಾವ್ ಮಾಡಿದ್ರಿ. ರೀಡೂ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರ ಏನು.? ನಿಮ್ಮ ರಾಷ್ಟ್ರೀಯ ಅಧ್ಯಕ್ಷ ವೇಣುಗೋಪಾಲ್ ಎಷ್ಟು ಹಗರಣದಲ್ಲಿ, ಭ್ರಷ್ಟಾಚಾರದಲ್ಲಿ ಸಿಲುಕಿದ್ದಾರಲ್ಲ. ಮೇಟಿ ಅವರು ಏನು ಮಾಡಿದ್ರು, ಅದರ ಬಗ್ಗೆ ಪ್ರಿಯಾಂಕ್ ಖರ್ಗೆ ಏನ್ ಹೇಳ್ತಾರೆ.? ಎಂದು ಪ್ರಶ್ನಿಸಿದರು.
ಪ್ರಬುದ್ಧತೆ ಏನಾದ್ರೂ ಇದ್ರೆ, ಪ್ರಿಯಾಂಕ್ ಖರ್ಗೆ ಹೀಗೆ ಹೇಳ್ತಿರಲಿಲ್ಲ. ಇನ್ನೂ ಬೆಳೆಯುತ್ತಿರುವ ರಾಜಕಾರಣಿ ನೀವು. ಹಿರಿಯರನ್ನು ನೀವು ಅನುಸರಿಸಬೇಕು. ನಿಮ್ಮ ತಂದೆಯಿಂದ ಇದನ್ನೇ ಕಲಿತಿದ್ದಾ ನೀವು.? ಖರ್ಗೆ ರಾಷ್ಟ್ರೀಯ ನಾಯಕರು, ಅವರನ್ನು ನಾವು ಕೂಡ ಹಿಂಬಾಲಿಸಿದ್ದೇವೆ.
ಜನ ನಿಮ್ಮನ್ನು ಸುಮ್ಮನೆ ಬಿಡಲ್ಲ, ತಕ್ಕ ಪಾಠ ಕಲಿಸ್ತಾರೆ. ಅಮೃತ ಮಹೋತ್ಸವ ಸಂದರ್ಭದಲ್ಲಿ ಎಲ್ಲರೂ ಧ್ವಜ ಹಾರಿಸೋ ಕೆಲಸ ಮಾಡಬೇಕು. ಇಂತಹ ಸಂದರ್ಭಗಳಲ್ಲಿ ನಿಮ್ಮ ಹೇಳಿಕೆ ಸರಿಯಲ್ಲ. ನಿಮ್ಮ ಯೋಗ್ಯತೆಗೆ ತಕ್ಕವಾದ ಮಾತನ್ನು ಆಡಿಲ್ಲ. ಕೂಡಲೇ ನೀವು ಕ್ಷಮೆ ಕೇಳಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ನಾವು ಭಾರತದ ಧ್ವಜ ಮನೆ ಮನೆಗಳ ಮೇಲೆ ಕಟ್ಟುವ ಕೆಲಸ ಮಾಡಿದ್ದೇವೆ. ಆದ್ರೆ ಎಲ್ಲೂ ಬಿಜೆಪಿ ಧ್ವಜವನ್ನು ಹಾರಿಸಿಲ್ಲ, ತೋರಿಸಿಲ್ಲ. ಆದ್ರೆ, ಕಾಂಗ್ರೆಸ್ ಮಾತ್ರ ಕಾಂಗ್ರೆಸ್ ಧ್ವಜವನ್ನು ಪೈಪೋಟಿ ಮೇಲೆ ಹಾರಿಸ್ತಿದ್ದಾರೆ. ಸಿದ್ದರಾಮೋತ್ಸವ ಬಳಿಕ, ನಾನು ಪೈಪೋಟಿಗೆ ಮೇಲೆ ಬರಬೇಕು ಅಂತ ಡಿಕೆಶಿ ಮಾಡ್ತಿದ್ದಾರೆ ಎಂದರು.
ಇದನ್ನೂ ಓದಿ: ಮಂತ್ರಾಲಯ ಶ್ರೀಮಠಕ್ಕಾಗಿ ಏರೋಡ್ರೋಮ್ ಯೋಜನೆ ತರಬೇಕೆನ್ನುವ ಆಸೆಯಿದೆ: ಜಗ್ಗೇಶ್