ಬೆಂಗಳೂರು : ನಗರದ ಅರಮನೆ ಮೈದಾನದಲ್ಲಿ ಜನವರಿ 5 ರಿಂದ 7 ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳದಲ್ಲಿ ಯಾವುದೇ ವ್ಯತ್ಯಾಸಗಳಾಗದಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸುವಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಶೇಷಾದ್ರಿ ರಸ್ತೆಯಲ್ಲಿರುವ ಕೃಷಿ ಆಯುಕ್ತಾಲಯದ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳದ ಪೂರ್ವಭಾವಿ ಸಿದ್ಧತಾ ಪರಿಶೀಲನಾ ಸಭೆ ನಡೆಸಿ ಹಲವು ಸಲಹೆ ಸೂಚನೆಗಳನ್ನು ನೀಡಿದ ಸಚಿವರು, ಈ ಮೇಳದ ಉದ್ಘಾಟನೆ, ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ, ಕೇಂದ್ರ ಸರ್ಕಾರದ ಹಲವು ಸಚಿವರು ಹಾಗೂ ರಾಜ್ಯದ ಸಚಿವರು ಪಾಲ್ಗೊಳ್ಳಲಿದ್ದು, ಶಿಷ್ಟಾಚಾರದಲ್ಲಿ ಯಾವುದೇ ಲೋಪ ಉಂಟಾಗದಂತೆ ಗಮನಹರಿಸಲು ತಿಳಿಸಿದರು.
ದೇಶ ವಿದೇಶದ ವಿಜ್ಞಾನಿಗಳು, ತಜ್ಞರು, ಗಣ್ಯರು ಇದರಲ್ಲಿ ಪಾಲ್ಗೊಳ್ಳುವುದರಿಂದ ಎಲ್ಲ ಕಾರ್ಯಕ್ರಮಗಳು ಗುಣಾತ್ಮಕವಾಗಿ ಹಾಗೂ ರಚನಾತ್ಮಕವಾಗಿರಲಿ. ರೈತ ಸ್ನೇಹಿ, ಗ್ರಾಹಕ ಸ್ನೇಹಿ ವಾತಾವರಣ ಸೃಷ್ಟಿ ಮಾಡಿ. ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಿ. ಸಿರಿಧಾನ್ಯಗಳ ಕೃಷಿ, ಅದರ ಉತ್ಪನ್ನಗಳ ಮೌಲ್ಯ ವರ್ಧನೆ, ವಿಭಿನ್ನ ಖಾದ್ಯ ತಯಾರಿಕೆ ಬಗ್ಗೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ದೊರೆಯುವಂತೆ ಮಾಡಿ ಎಂದು ಸೂಚಿಸಿದರು. ಈ ವೇಳೆ, ಕೃಷಿ ಇಲಾಖೆ ಕಾರ್ಯದರ್ಶಿ ವಿ.ಅನ್ಬುಕುಮಾರ್, ಕೃಷಿ ಆಯುಕ್ತ ವೈ.ಎಸ್ ಪಾಟೀಲ್, ನಿರ್ದೇಶಕ ಡಾ ಜಿ.ಟಿ ಪುತ್ರ, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಸಿರಿಧಾನ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಅಗತ್ಯ: ಬುಧವಾರ ನಗರದ ಕ್ರೈಸ್ಟ್ ವಿವಿ ಆವರಣದಲ್ಲಿ ಕೃಷಿ ಸಚಿವಾಲಯ ಮತ್ತು ಕ್ರೈಸ್ಟ್ ಕಾಲೇಜಿನ ಪೀಸ್ ಪ್ರಾಕ್ಸಿಸ್ ಅಂಡ್ ಡಿಪಾರ್ಟ್ ಮೆಂಟ್ ಆಫ್ ಮೀಡಿಯಾ ಸ್ಟಡೀಸ್ ಸಹಯೋಗದಲ್ಲಿ 'ಮಿಲೆಟ್ ತಿಂತೀರಾ – ಸಿರಿಧಾನ್ಯ ಸಂಸ್ಕೃತಿ ಉತ್ತೇಜಿಸೋಣ' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಕೃಷಿ ಸಚಿವರು, ವಿಭಿನ್ನ ಆಹಾರ ಸಂಸ್ಕೃತಿ ಹೊಂದಿರುವ ಕ್ರೈಸ್ಟ್ ನಂತಹ ಶಿಕ್ಷಣ ಸಂಸ್ಥೆಗಳಲ್ಲಿ ಸಿರಿಧಾನ್ಯ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ವಿದ್ಯಾರ್ಥಿ ಸಮೂಹ ಭವಿಷ್ಯದ ಆಹಾರದ ಬಗ್ಗೆ ಗಮನಹರಿಸಬೇಕಾಗಿದ್ದು, ಸಿರಿಧಾನ್ಯ ಏಕೆ ಅಗತ್ಯ ಎಂಬ ಕುರಿತು ತಿಳಿದುಕೊಳ್ಳಬೇಕು. ಜಗತ್ತಿನಾದ್ಯಂತ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಅದರಲ್ಲಿ ಪ್ರಮುಖವಾಗಿ ಜೀವನ ಶೈಲಿ, ಆಹಾರ ಪದ್ಧತಿ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಪ್ರಾರಂಭದಿಂದಲೇ ಆಹಾರ ಬಳಕೆಯಲ್ಲಿ ಬದಲಾವಣೆ ಮಾಡಿಕೊಂಡರೆ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.
ಸಿರಿಧಾನ್ಯಗಳು ದೇಹಕ್ಕೆ ಪುಷ್ಟಿ ನೀಡುತ್ತವೆಯಲ್ಲದೇ ದೀರ್ಘಕಾಲದಲ್ಲಿ ದೈಹಿಕ ಸ್ಥಿರತೆ ಹೆಚ್ಚಿಸಲು ನೆರವಾಗಲಿದೆ. ಜಗತ್ತಿನಾದ್ಯಂತ ಸಿರಿಧಾನ್ಯ ಪ್ರಮುಖ ಆಹಾರ ಪದ್ಧತಿಯಾಗಿದೆ. ಕಡಿಮೆ ವೆಚ್ಚ, ಕಡಿಮೆ ಅವಧಿ, ಕಡಿಮೆ ನೀರಿನಲ್ಲಿ ಸಿರಿಧಾನ್ಯಗಳನ್ನು ಬೆಳೆಯುವುದರಿಂದ ರೈತರಿಗೆ ವೆಚ್ಚ ಕಡಿಮೆಯಾಗಿ, ಹೆಚ್ಚಿನ ಆದಾಯ ತಂದುಕೊಡುತ್ತದೆ. ಇದೀಗ ಸಿರಿಧಾನ್ಯಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ದೊರೆತಿದ್ದು, ಬ್ರ್ಯಾಂಡಿಂಗ್ಗೆ ಒತ್ತು ನೀಡಲಾಗಿದೆ. ಜನವರಿ 5 ರಿಂದ ಮೂರು ದಿನಗಳ ಕಾಲ ಅರಮನೆ ಮೈದಾನದಲ್ಲಿ ಸಿರಿಧಾನ್ಯ ಮೇಳದಲ್ಲಿ ದೇಶದ ವಿದೇಶಗಳ ತಜ್ಞರು ಪಾಲ್ಗೊಂಡು ಸಿರಿಧಾನ್ಯಗಳ ಮಹತ್ವದ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ವಿದ್ಯಾರ್ಥಿ ಸಮುದಾಯ ಕೂಡ ಇದರಲ್ಲಿ ಪಾಲ್ಗೊಂಡು ಸಿರಿಧಾನ್ಯಗಳ ಪಾಕಪದ್ಧತಿ, ಉಪ ಉನ್ಪನ್ನಗಳು, ಸಿರಿಧಾನ್ಯದ ಮಹತ್ವದ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ಕೃಷಿ ಸಚಿವರು ಹೇಳಿದರು.
ಇದನ್ನೂ ಓದಿ : ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಗೆ ಸಿರಿಧಾನ್ಯ ಸಹಕಾರಿ : ಡಾ. ಹೆಚ್.ಸಿ.ಮಹದೇವಪ್ಪ
ಕ್ರೈಸ್ಟ್ ವಿವಿ ಉಪಕುಲಪತಿ ಡಾ. ಫಾದರ್ ಜೋಸೆಫ್ ಮಾತನಾಡಿ, ಜಗತ್ತಿನಲ್ಲಿ ಇಂದು ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡುತ್ತಿದೆ. ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನದಲ್ಲಿ ಸಿರಿಧಾನ್ಯವನ್ನು ತಾವು ಬಹು ಹಿಂದಿನಿಂದ ಬಳಸುತ್ತಿದ್ದು, ದೈಹಿಕ ಆರೋಗ್ಯ ರಕ್ಷಣೆಗೆ ಸಿರಿಧಾನ್ಯಗಳನ್ನು ಪ್ರತಿಯೊಬ್ಬರೂ ಬಳಸುವಂತಾಗಬೇಕು ಎಂದು ಹೇಳಿದರು.