ಬೆಂಗಳೂರು : ಆತಂಕದ ನಡುವೆಯೂ ಸಿಇಟಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಹೇಳಿದರು.
ವಿಕಾಸಸೌಧದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಸಿಇಟಿ ಪರೀಕ್ಷೆ ಯಶಸ್ವಿಯಾಗಿದೆ. ಯಾವುದೇ ಅನಾನುಕೂಲ ಆಗದಂತೆ ಪರೀಕ್ಷೆ ಮುಗಿಸಿದ್ದೇವೆ. ಪರೀಕ್ಷೆ ಯಶಸ್ವಿಯಾಗಿ ನಡೆಯಲು ಕಾರಣರಾದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಉನ್ನತ ಶಿಕ್ಷಣ, ಬಿಬಿಎಂಪಿ, ಕೆಎಸ್ಆರ್ಟಿಸಿ, ಬಿಎಂಟಿಸಿ, ಆರೋಗ್ಯ, ಪೊಲೀಸ್ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೃತಜ್ಞತೆಗಳು ಸಲ್ಲಿಸುತ್ತೇನೆ. ಸೋಮವಾರ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಅಭಿನಂದನೆ ಸಲ್ಲಿಸಲಿದ್ದೇನೆ ಎಂದರು.
ಅಂತಿಮ ವರ್ಷದ ಪದವಿ ಪರೀಕ್ಷೆ ನಡೆಸುವ ಬಗ್ಗೆ ಪ್ರತಿಕ್ರಿಯಿಸಿ, ಪರೀಕ್ಷೆ ಕುರಿತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ಪಷ್ಟನೆ ನೀಡುತ್ತಿದ್ದೇನೆ. ಬ್ಯಾಕ್ ಲಾಗ್ ವಿಷಯಗಳ ಪರೀಕ್ಷೆಗಳನ್ನೂ ಕೂಡ ಅಂತಿಮ ಪರೀಕ್ಷೆ ವೇಳೆ ಮಾಡುತ್ತೇವೆ. ಬ್ಯಾಕ್ ಲಾಗ್ ವಿಷಯಗಳ ಪರೀಕ್ಷೆ ಮಾಡಲ್ಲ ಎಂಬ ಆತಂಕ ಬೇಡ ಎಂದು ತಿಳಿಸಿದರು.
33 ಸರ್ಕಾರಿ ಪದವಿ ಕಾಲೇಜ್ಗಳಿಗೆ ಸ್ಥಳವಿಲ್ಲ : ರಾಜ್ಯದ ಸುಮಾರು 33 ಸರ್ಕಾರಿ ಪದವಿ ಕಾಲೇಜುಗಳಿಗೆ ಸ್ವಂತ ಸ್ಥಳವಿಲ್ಲ. ಅಂತಹ ಕಾಲೇಜುಗಳಿಗೆ ತ್ವರಿತವಾಗಿ ಸ್ವಂತ ಭೂಮಿ ದೊರಕುವಂತೆ ಮಾಡಲಾಗುವುದು. ಸರ್ಕಾರಿ ಕಾಲೇಜುಗಳಿಗೆ ಸ್ಥಳ ಇಲ್ಲವೆಂದರೆ ಸರಿಯಾಗುವುದಿಲ್ಲ. ಹಾಗಾಗಿ, ಎಲ್ಲರಿಗೂ ಜಾಗ ಕೊಡುತ್ತೇವೆ. ತಕ್ಷಣವೇ ಕಾಲೇಜುಗಳಿಗೆ ಜಾಗ ಸಿಗುವಂತಾಗಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರಿ ಡಿಪ್ಲೋಮಾ ಮತ್ತು ಐಟಿಐ ಕಾಲೇಜುಗಳಿಗೂ ಸ್ವಂತ ಜಾಗವಿಲ್ಲ. ಆ ಕಾಲೇಜುಗಳಿಗೂ ಜಾಗ ಕೊಡಲು ತಿಳಿಸಲಾಗಿದೆ ಎಂದರು.
ಅ್ಯಂಟಿಜೆನ್ ಪರೀಕ್ಷೆಗೆ ಒಳಗಾಗುತ್ತೇನೆ : ಸಿಎಂ ಬಿಎಸ್ವೈಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಅವರೊಂದಿಗೆ ಸಂಪರ್ಕದಲ್ಲಿದ್ದ ನಾನೂ ಕೂಡ ಆ್ಯಂಟಿಜೆನ್ ಹಾಗೂ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದಷ್ಟು ಬೇಗ ಗುಣಮುಖರಾಗಿ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದರು.