ಬೆಂಗಳೂರು : ಸಿಇಟಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿರುವ ಜಾತಿ/ಆದಾಯ/ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳ ಆರ್‌ಡಿ ಸಂಖ್ಯೆಯನ್ನು ಕಂದಾಯ ಇಲಾಖೆಯ ಆರ್.ಡಿ ಸಂಖ್ಯೆ ಜೊತೆ ನಮೂದಿಸುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಆದರೆ, ಸಾವಿರಾರು ಅಭ್ಯರ್ಥಿಗಳ ಈ ಸಂಖ್ಯೆಗಳು ನಾನಾ ಕಾರಣಗಳಿಗಾಗಿ ತಾಳೆಯಾಗದೆ ಇರುವ ಹಿನ್ನೆಲೆಯಲ್ಲಿ ಸೂಕ್ತ ತಿದ್ದುಪಡಿಗೆ ಜೂನ್ 7ರ ಸಂಜೆ 4 ಗಂಟೆಯಿಂದ ಜೂನ್ 12ರ ಬೆಳಿಗ್ಗೆ 11 ಗಂಟೆಯವರೆಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ : ನೀಟ್ ವಿದ್ಯಾರ್ಥಿಗಳ ಮೇಲಿದ್ದ ಕಾಳಜಿ ಸಿಇಟಿ ವಿದ್ಯಾರ್ಥಿಗಳ ಮೇಲೆ ಏಕಿಲ್ಲ: ಕೈ ನಾಯಕರ ಕಾಲೆಳೆದ ಬಿಜೆಪಿ
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಮಾಹಿತಿ ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, "ಆರ್‌ಡಿ ಸಂಖ್ಯೆಗಳು ತಿರಸ್ಕೃತಗೊಂಡಿರುವ ಅಭ್ಯರ್ಥಿಗಳ ಹೆಸರುಗಳನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಪರಿಶೀಲನಾ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಹೆಸರು ಅಥವಾ ನಮೂದಿಸಿರುವ ಜಾತಿಯಲ್ಲಿ ವ್ಯತ್ಯಾಸ, ಪ್ರಮಾಣಪತ್ರ ಚಾಲ್ತಿಯಲ್ಲಿ ಇಲ್ಲದಿರುವುದು, ಅಭ್ಯರ್ಥಿಗಳ ಹೆಸರಿನಲ್ಲಿ ಪ್ರಮಾಣಪತ್ರ ಇಲ್ಲದಿರುವುದು ಅಥವಾ ನಿಗದಿತ ನಮೂನೆಗಳಲ್ಲಿ ಈ ಪ್ರಮಾಣಪತ್ರ ಪಡೆಯದೆ ಇರುವ ಕಾರಣಗಳಿಂದ ಹೀಗಾಗಿದೆ. ಆದ್ದರಿಂದ, ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪ್ರಾಧಿಕಾರದ ಪೋರ್ಟಲ್ ತೆರೆಯಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಅಂಕ ದಾಖಲಿಸಲು ಅವಕಾಶ : ಸಿಬಿಎಸ್‌ಇ, ಸಿಐಎಸ್‌ಸಿಇ, 10+2, ಐಜಿಸಿಎಸ್‌ಇ ಮುಂತಾದ ಪಠ್ಯಕ್ರಮಗಳಲ್ಲಿ 12ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಮತ್ತು ಕರ್ನಾಟಕ ಪಠ್ಯಕ್ರಮದಲ್ಲಿ 2023ಕ್ಕೆ ಮೊದಲೇ ದ್ವಿತೀಯ ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳು ಕೂಡ ತಮ್ಮ ಅಂಕಗಳ ವಿವರ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ತಿಂಗಳ ಜೂನ್ 7ರ ಸಂಜೆ 4 ಗಂಟೆಯಿಂದ ಜೂನ್ 9ರ ಸಂಜೆ 6ರವರೆಗೆ ಪ್ರಾಧಿಕಾರದ ಪೋರ್ಟಲ್ ಅನ್ನು ಮತ್ತೊಮ್ಮೆ ತೆರೆಯಲಾಗುವುದು ಎಂದು ಎಸ್.ರಮ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ತಿಂಗಳ ಮೇ 20 ಮತ್ತು 21 ರಂದು ಸಿಇಟಿ ಪರೀಕ್ಷೆ ನಡೆದಿದ್ದು, ಸಿಇಟಿ ಪರೀಕ್ಷೆಗೆ ಹಾಜರಾಗುವ ಹೊರನಾಡು ಮತ್ತು ಗಡಿನಾಡು ವಿದ್ಯಾರ್ಥಿಗಳಿಗೆ ಮೇ 22 ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡಲಾಗಿತ್ತು. ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದೆ ಎಂದು ಕೆಲವರು ಪೂರಕ ಪರೀಕ್ಷೆ ಬರೆಯಲು ನಿರ್ಧರಿಸಿದವರು ಕೂಡ ಸಿಇಟಿ ಪರೀಕ್ಷೆ ಬರೆಯುವುದಕ್ಕೆ ಮತ್ತು ಪೂರಕ ಪರೀಕ್ಷೆ ಬರೆಯುವವರು ಸಿಇಟಿಗೆ ಹಾಜರಾದರೆ ಮಾತ್ರ ಅವರ ಪೂರಕ ಪಿಯು ಪರೀಕ್ಷೆ ಫಲಿತಾಂಶದ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಈ ಹಿಂದೆಯೇ ಕೂಡ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು.
ಇದನ್ನೂ ಓದಿ : ಸಿಇಟಿ 2023: ಮೊದಲ ದಿನ ಸುಸೂತ್ರ; ಇಂದು ಭೌತ, ರಸಾಯನ ಶಾಸ್ತ್ರ ಪರೀಕ್ಷೆ