ಬೆಂಗಳೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮೇಕೆದಾಟು ಅಣೆಕಟ್ಟು ಯೋಜನೆಗೆ ಕೇಂದ್ರ ಜಲ ಆಯೋಗ ಗ್ರೀನ್ ಸಿಗ್ನಲ್ ನೀಡುವ ಲಕ್ಷಣಗಳು ಗೋಚರಿಸುತ್ತಿವೆ. ಈ ಯೋಜನೆಗೆ ಸಂಬಂಧಿಸಿದ ಸಮಗ್ರ ಯೋಜನಾ ವರದಿಯನ್ನು ಇದುವರೆಗೆ ಕೈಗೆತ್ತಿಕೊಳ್ಳದ ಆಯೋಗ ಜುಲೈ 6ರಂದು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಜುಲೈ 6 ಮತ್ತು 7ರಂದು ನಡೆಯಲಿರುವ ಕೇಂದ್ರ ಜಲ ಆಯೋಗದ ಸಭೆಯಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿರುವ ಸಮಗ್ರ ಯೋಜನಾ ವರದಿಯನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ. ಕಾವೇರಿ ನದಿಗೆ ಮೇಕೆದಾಟು ಎಂಬಲ್ಲಿ ಕಟ್ಟುವ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸುವುದಲ್ಲದೆ ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ನೀರು ಒದಗಿಸುವ ಕುರಿತಂತೆ ಸಮಗ್ರ ಯೋಜನಾ ವರದಿ ವಿವರಿಸಿದೆ.
ಮೇಕೆದಾಟು ಯೋಜನೆಯ ಬಗ್ಗೆ ತಕರಾರು ಮಾಡುತ್ತಿರುವ ತಮಿಳುನಾಡಿನ ವಾದದಲ್ಲಿ ಯಾವುದೇ ಹುರುಳಿಲ್ಲ. ಯಾಕೆಂದರೆ ನ್ಯಾಯಮಂಡಳಿ ತೀರ್ಪಿನ ಪ್ರಕಾರ ತಮಿಳುನಾಡಿಗೆ ನಿಗದಿಯಾದ ವಾರ್ಷಿಕ 177 ಟಿಎಂಸಿಯಷ್ಟು ನೀರು ಪ್ರತಿವರ್ಷ ಹರಿದು ಹೋಗುತ್ತಿದೆ. ಕಾವೇರಿ ನ್ಯಾಯಮಂಡಳಿಯ ತೀರ್ಪಿನ ಪ್ರಕಾರ ತಮಿಳುನಾಡಿಗೆ ನಿಗದಿಯಾದ ನೀರು ಹರಿದು ಹೋದ ಮೇಲೆ ಕರ್ನಾಟಕ ತನ್ನ ಪಾಲಿನ ನೀರನ್ನು ಹೇಗೆ ಬಳಸಿಕೊಳ್ಳಬೇಕೆಂಬ ವಿಷಯದಲ್ಲಿ ತಲೆ ತೂರಿಸುವಂತೆಯೇ ಇಲ್ಲ.
ಆದರೆ, ಮೇಕೆದಾಟು ಅಣೆಕಟ್ಟು ನಿರ್ಮಿಸಿದರೆ ಅಲ್ಲಿ ನೀರು ಸಂಗ್ರಹವಾಗುತ್ತದೆ. ಕರ್ನಾಟಕ ತನ್ನ ಪಾಲಿನ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತದೆ. ಇದರಿಂದಾಗಿ ತಮಗೆ ನಿಗದಿಯಾಗಿರುವ ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತಿರುವ ನೀರು ಕಡಿತವಾಗುತ್ತದೆ ಎಂಬುದು ತಮಿಳುನಾಡಿನ ಯೋಚನೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದೇ ಕಾರಣಕ್ಕಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಉದ್ದೇಶಕ್ಕೆ ಅಡ್ಡಗಾಲು ಹಾಕುತ್ತಿರುವ ತಮಿಳುನಾಡು ಒಂದಿಲ್ಲೊಂದು ನೆಪವೊಡ್ಡಿ ಕೇಂದ್ರ ಜಲ ಆಯೋಗದ ಮುಂದಿರುವ ತಕರಾರು ಅರ್ಜಿಯ ವಿಚಾರಣೆ ಕಾಲ ಕಾಲಕ್ಕೆ ನಡೆಯದಂತೆ ತಂತ್ರ ಹೂಡುತ್ತಿದೆ. ಯಾವ ಕಾರಣಕ್ಕಾಗಿ ಕರ್ನಾಟಕ ಮೇಕೆದಾಟು ಅಣೆಕಟ್ಟು ನಿರ್ಮಿಸಬಾರದು ಎಂಬುದಕ್ಕೆ ತಮಿಳುನಾಡು ಕೊಡುತ್ತಿರುವ ವಾದ ಸರಿಯಿಲ್ಲ ಎಂಬ ಭಾವನೆ ವ್ಯಾಪಕವಾಗ ತೊಡಗಿದ್ದು, ಅದೇ ಕಾಲಕ್ಕೆ ಕರ್ನಾಟಕ ಸರ್ಕಾರ ಕೂಡಾ ತನ್ನ ವಾದವನ್ನು ಪದೇ ಪದೇ ಕೇಂದ್ರ ಜಲ ಆಯೋಗದ ಮುಂದೆ ಮಂಡಿಸುತ್ತಲೇ ಬರುತ್ತಿದೆ.
ಇದರ ಪರಿಣಾಮವಾಗಿ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿರುವ ಸಮಗ್ರ ಯೋಜನಾ ವರದಿಯನ್ನು ಪರಿಶೀಲಿಸಲು ಕೇಂದ್ರ ಜಲ ಆಯೋಗ ನಿರ್ಧರಿಸಿದ್ದು, ಜಲ ಆಯೋಗದ ಸಭೆಯಲ್ಲಿ ರಾಜ್ಯದ ವಾದವನ್ನಲ್ಲದೆ, ತಮಿಳುನಾಡಿನ ತಕರಾರು ಏನೆಂಬುದನ್ನೂ ಕೇಳಲಿದೆ. ಕಾವೇರಿ ನದಿಯಿಂದ ತನ್ನ ಪಾಲು ದೊರೆತ ಮೇಲೆ ಕರ್ನಾಟಕಕ್ಕೆ ಅಡ್ಡಗಾಲು ಹಾಕುವ ತಮಿಳುನಾಡಿನ ಉದ್ದೇಶವನ್ನು ಕೇಂದ್ರ ಜಲ ಆಯೋಗ ಪರಿಶೀಲನೆ ಮಾಡಲಿದ್ದು, ತಮಿಳುನಾಡಿನ ವಾದ ಸಮರ್ಪಕವಾಗಿಲ್ಲದೆ ಇದ್ದರೆ ಕರ್ನಾಟಕದ ಸಮಗ್ರ ಯೋಜನಾ ವರದಿಗೆ ಗ್ರೀನ್ ಸಿಗ್ನಲ್ ನೀಡಲಿದೆ ಎಂದು ತಿಳಿದುಬಂದಿದೆ.
ಉನ್ನತ ಮೂಲಗಳ ಪ್ರಕಾರ, ಮೇಕೆದಾಟು ಅಣೆಕಟ್ಟನ್ನು ನಿರ್ಮಿಸುವ ಕರ್ನಾಟಕದ ಉದ್ದೇಶಕ್ಕೆ ತಮಿಳುನಾಡು ಅಡ್ಡಗಾಲು ಹಾಕಲು ಯತ್ನಿಸುತ್ತಿರುವ ಸಂಗತಿಯನ್ನು ಕರ್ನಾಟಕ ಪರಿಣಾಮಕಾರಿಯಾಗಿ ಕೇಂದ್ರ ಜಲ ಆಯೋಗಕ್ಕೆ ವಿವರಿಸಿದೆ. ಕರ್ನಾಟಕದ ಸಮಗ್ರ ಯೋಜನಾ ವರದಿಯಲ್ಲಿ ಯಾವ ತಪ್ಪುಗಳು ಇಲ್ಲ. ಅದೇ ರೀತಿ ತಮಿಳುನಾಡಿನ ವಾದದಲ್ಲಿ ಹುರುಳು ಕಾಣಿಸುತ್ತಿಲ್ಲ. ಹೀಗಾಗಿ ಅಂತಿಮವಾಗಿ ತನ್ನ ಮುಂದೆ ಇರುವ ಸಮಗ್ರ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಶ್ರೇಷ್ಠ ತಾಂತ್ರಿಕ ವ್ಯವಸ್ಥೆ ರೂಪಿಸಿ: ಬಾಷ್ ಸಂಸ್ಥೆಗೆ ಸಿಎಂ ಬೊಮ್ಮಾಯಿ ಸಲಹೆ