ಬೆಂಗಳೂರು : ಕೇಂದ್ರದಿಂದ ನೀಡುವ 12,909 ಕೋಟಿ ರೂ. ಜಿಎಸ್‌ಟಿ ಪರಿಹಾರ ಹಣ ಬಾಕಿ ಇದ್ದು ಮುಂಬರುವ ವರ್ಷದಲ್ಲಿ ರಾಜ್ಯಕ್ಕೆ ಪಾವತಿಸುವ ಕುರಿತು ಕೇಂದ್ರ ಸರ್ಕಾರ ತಿಳಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದರು.
ನಿನ್ನೆ ಬಜೆಟ್ ಮೇಲಿನ ಚರ್ಚೆಯಲ್ಲಿ ಉತ್ತರಿಸಿದ ಸಿಎಂ, ಆರ್ಥಿಕ ವರ್ಷ 2017-18 ನೇ ಸಾಲಿನಿಂದ ಶೇ.14ರ ಪ್ರಮಾಣದಲ್ಲಿ ರಾಜ್ಯ ಅಭಿವೃದ್ಧಿಯಾಗಿದೆ. ರಾಜ್ಯಕ್ಕೆ ಜಿಎಸ್‌ಟಿ ಪರಿಹಾರವಾಗಿ 97.688 ಕೋಟಿ ರೂ. ಬರಬೇಕಿದ್ದು, ಈವರೆಗೆ ಒಟ್ಟು 54,263 ಕೋಟಿ ರೂ. ಬಂದಿದೆ. 30,516 ಕೋಟಿ ರೂ. ಸಾಲದ ರೂಪದಲ್ಲಿ ನೀಡಲಾಗಿದೆ. ಇನ್ನು 12,909 ಕೋಟಿ ರೂ. ಬಾಕಿ ಇದೆ. ಮುಂಬರುವ ವರ್ಷದಲ್ಲಿ ಇದನ್ನ ಕೇಂದ್ರ ಸರ್ಕಾರ ನೀಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಲವು ಸಂದರ್ಭದಲ್ಲಿ ಅಭಿವೃದ್ಧಿ ಪ್ರಮಾಣ ಕಡಿಮೆಯಾಗಿದೆ. ಆದರೂ, ರಾಜ್ಯದ ಅರ್ಥಿಕತೆಯಲ್ಲಿ ಸಮಾತೋಲನ ಕಾಯ್ದುಕೊಳ್ಳಲಾಗಿದೆ. ಸಂಪೂರ್ಣವಾಗಿ ವಿಶ್ಲೇಷಣೆ ಮಾಡಿದಾಗ ಸತ್ಯಾಂಶ ತಿಳಿಯಲಿದೆ. ಕೋವಿಡ್ ನಂತರದ ಸಮಯದಲ್ಲಿ ಆರ್ಥಿಕತೆ ಕುಗ್ಗಿದೆ ಎಂದು ಹೇಳಿದರು.
ಪ್ರತಿಪಕ್ಷ ನಾಯಕರು ರಾಜ್ಯ ಸರ್ಕಾರದ ಸಾಲದ ಮೊತ್ತ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಸಾಲದ ಮೊತ್ತ ಹೆಚ್ಚಾಗಲು ಕಾರಣಗಳೇನು? ಎಂಬುದನ್ನು ಅವಲೋಕಿಸದೇ ಟೀಕೆ ಮಾಡಬಾರದು. ಎರಡು ವರ್ಷದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ 15,645 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅಲ್ಲದೇ, ಅಬಕಾರಿ ಹೊರತುಪಡಿಸಿದರೆ ಇತರ ತೆರಿಗೆಯ ಸ್ವೀಕೃತಿ ಕಡಿಮೆಯಾಗಿದೆ. 2020-21 ನೇ ಸಾಲಿನಲ್ಲಿ ಅಬಕಾರಿ ಇಲಾಖೆಯಲ್ಲಿ 636 ಕೋಟಿ ರೂ. ಹೆಚ್ಚಳವಾದರೆ, ಇನ್ನುಳಿದ ತೆರಿಗೆ ಇಲಾಖೆಯಲ್ಲಿ ಕಡಿಮೆಯಾಗಿದೆ. ವಾಣಿಜ್ಯ ತೆರಿಗೆಯಲ್ಲಿ 11,404 ಕೋಟಿ ರೂ., ಮೋಟಾರು ವಾಹನದಲ್ಲಿ 2,079 ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕದಲ್ಲಿ 1,500 ಕೋಟಿ ರೂ., ಇತರ ತೆರಿಗೆಯಲ್ಲಿ 540 ಕೋಟಿ ರೂ. ಕಡಿಮೆಯಾಗಿದೆ.
ಕೇಂದ್ರದ ತೆರಿಗೆ ಪಾಲಿನಲ್ಲಿಯೂ ಕಡಿಮೆಯಾಗಿದ್ದು, ರಾಜ್ಯ ಸರ್ಕಾರ ಮಾಡಿದ ಅಂದಾಜಿಗಿಂತ 21,835 ಕೋಟಿ ರೂ. ಕಡಿಮೆಯಾಯಿತು. ಈ ಎಲ್ಲ ಕಾರಣಗಳಿಗಾಗಿ ಖರ್ಚು ನಿಭಾಯಿಸಲು ಅನಿವಾರ್ಯವಾಗಿ ಸಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಬೇಕಾಗಿದೆ ಎಂದು ಸಿಎಂ ಸಮರ್ಥಿಸಿಕೊಂಡರು.
ಇತ್ತೀಚೆಗೆ ಅರ್ಥಿಕ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿದೆ. ಹೀಗಾಗಿ ಮುಂದಿನ ದಿನದಲ್ಲಿ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿ ಆದಾಯದ ಕೊರತೆ ಕಡಿಮೆ ಮಾಡುತ್ತೇವೆ. ಬದ್ಧ ವೆಚ್ಚಗಳು ಶೇ.98 ರಷ್ಟು ಇರುವುದನ್ನು ಶೇ.89 ಗೆ ಇಳಿಸುವ ಕೆಲಸ ಮಾಡುತ್ತಿದ್ದೇವೆ. ಇದನ್ನು ಗಮನಿಸಿದಾಗ ರಾಜ್ಯದ ಅರ್ಥಿಕತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: 'ಕಾಶ್ಮೀರಿ ಪಂಡಿತರಿಗಾಗಿ ನೀವೇನು ಮಾಡಿದ್ದೀರಿ'? ಕೇಂದ್ರ ಸರ್ಕಾರದ ವಿರುದ್ಧ ಸುಪ್ರಿಯಾ ವಾಗ್ದಾಳಿ