ಬೆಂಗಳೂರು: ಲಸಿಕೆ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರಿಗೆ ದ್ರೋಹವೆಸಗಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಮತ್ತು ಸೋಂಕಿತರ ಪ್ರಾಣ ರಕ್ಷಣೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯತಾಳಿವೆ ಎಂದು ಆರೋಪಿಸಿ ವಿಕಾಸಸೌಧ ಆವರಣದ ಗಾಂಧಿ ಪ್ರತಿಮೆ ಮುಂಭಾಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಇಂದು ಸಾಂಕೇತಿವಾಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಲಸಿಕೆ ಲಭ್ಯ ಇಲ್ಲ ಎಂದಾದರೆ ಎಲ್ಲರಿಗೂ ಹಾಕುವುದಾಗಿ ಏಕೆ ಹೇಳಬೇಕಿತ್ತು. ರಾಜ್ಯದಲ್ಲಿ ಅಭಿಯಾನಕ್ಕೆ ಚಾಲನೆ ನೀಡುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
18 ವರ್ಷ ಮೀರಿದ ಎಲ್ಲರಿಗೂ ಲಸಿಕೆ ಹಾಕುವುದಾಗಿ ಪ್ರಧಾನಿ ಘೋಷಣೆ ಮಾಡಿದರು. ಆದರೆ, 45, 50 ವರ್ಷ ಮೀರಿದವರಿಗೇ ಇನ್ನೂ ಸಿಗುತ್ತಿಲ್ಲ. ಮೊದಲ ಡೋಸ್ ಪಡದವರೇ ಎರಡನೇ ಡೋಸ್‌ಗೆ ಪರದಾಡುತ್ತಿದ್ದಾರೆ. ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿಯಾಗಿ 13 ವರ್ಷ, ಪ್ರಧಾನಿಯಾಗಿ ಏಳು ವರ್ಷಗಳ ಅನುಭವವಿದೆ. ಆದರೂ ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಮೇ ಒಂದರಂದು ಲಸಿಕೆ ಅಭಿಯಾನ ಉದ್ಘಾಟಿಸಿದರು. ಆಗ ವ್ಯಾಕ್ಸಿನ್ ಎಲ್ಲಿತ್ತು ? ಮುಖ್ಯ ಕಾರ್ಯದರ್ಶಿಗಳು ಮೇ ಮೂರು ಅಥವಾ ನಾಲ್ಕನೇ ವಾರದಲ್ಲಿ ಲಸಿಕೆ ಬರುತ್ತದೆ ಎಂದಿದ್ದಾರೆ. ಆರೋಗ್ಯ ಸಚಿವರು 15 ದಿನ ಲಸಿಕೆ ಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ. ಇದನ್ನು ಜವಾಬ್ದಾರಿಯುತ ಸರ್ಕಾರ ಎಂದು ಕರೆಯಲು ಆಗುವುದೇ ? ಜನರು ಲಸಿಕೆಗಾಗಿ ಸರತಿ ಸಾಲಿನಲ್ಲಿ ದಿನಗಟ್ಟಲೇ ಕಾಯುತ್ತಿದ್ದಾರೆ. ಇದರ ಹೊಣೆಗಾರರು ಯಾರು ಎಂದು ಪ್ರಶ್ನಿಸಿದರು.
ಮತ್ತೊಂದೆಡೆ ಆಕ್ಸಿಜನ್ ಸಿಗದೇ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸೋಂಕು ವ್ಯಾಪಕವಾಗಿದ್ದು, 2ನೇ ಅಲೆ ತೀವ್ರವಾಗಿ ಬಾಧಿಸುತ್ತಿದೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮಾಹಿತಿ ಇತ್ತು. ತಜ್ಞರೂ ಸಹ ವರದಿ ನೀಡಿದ್ದರು. ಆದರೆ, ತಜ್ಞರ ವರದಿಯನ್ನು ಉಭಯ ಸರ್ಕಾರಗಳು ಉದಾಸೀನ ಮಾಡಿ, ಸಲಹೆಗಳನ್ನು ನಿರ್ಲಕ್ಷಿಸಿದವು. ಅದರ ಪರಿಣಾಮವಾಗಿ ಕೆಟ್ಟ ಪರಿಸ್ಥಿತಿ ಎದುರಿಸುವಂತಾಗಿದೆ ಎಂದರು.
ದೇಶ ಮತ್ತು ರಾಜ್ಯ ಇಂತಹ ಸ್ಥಿತಿಗೆ ಬರಲು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರೇ ನೇರ ಹೊಣೆಗಾರರು, ಮೊದಲೇ ಸಿದ್ಧತೆ ಮಾಡಿಕೊಂಡಿದ್ದರೆ, ಅಗತ್ಯ ವವಸ್ಥೆಗೆ ಕ್ರಮ ಕೈಗೊಂಡಿದ್ದರೆ ಪರಿಸ್ಥಿತಿ ಕೈ ಮೀರುತ್ತಿರಲಿಲ್ಲ. ಬೆಡ್, ಆಕ್ಸಿಜನ್, ರೆಮ್ಡೆಸಿವಿರ್, ವೆಂಟಿಲೇಟರ್ ಸಿದ್ಧತೆ ಮಾಡಿಕೊಳ್ಳಲಿಲ್ಲ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಈಗ ಮಾಡುತ್ತಿದ್ದಾರೆ. ಸರ್ಕಾರ ತಜ್ಞರ ವರದಿ, ಸಲಹೆ ಕೇಳುವುದಿಲ್ಲ. ತಜ್ಞರು ಸರ್ಕಾರದ ನಿರ್ಲಕ್ಷ್ಯ ಧೋರಣೆ ನೋಡಿ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಆದರೆ, ಕಟ್ಟುನಿಟ್ಟಾಗಿ ಮಾಡಿಲ್ಲ. ವಲಸೆ ಹೋಗಿರುವ ಕಾರ್ಮಿಕರಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಅವರು ಬದುಕುವುದಾದರೂ ಹೇಗೆ ? ಜೀವ ಉಳಿಸಿಕೊಳ್ಳಲು ಬಡವರಿಗೆ ಪ್ಯಾಕೇಜ್ ಘೋಷಣೆ ಮಾಡಿ ಎಂದು ಒತ್ತಾಯ ಮಾಡಿದರೂ ಸರ್ಕಾರ ಕಿವಿಗೊಡಲಿಲ್ಲ. ಹೀಗಾದರೆ ಸರ್ಕಾರದ ಜವಾಬ್ದಾರಿ ಏನು ? ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಏಕಿರಬೇಕು ? ಬೆಡ್ ಗೆ ಒಬ್ಬರು, ಲಸಿಕೆಗೆ ಇನ್ನೊಬ್ಬರು ಹೀಗೆ ಸಚಿವರನ್ನು ನೇಮಕ ಮಾಡಲಾಗಿದೆ. ಆದರೂ ಸೋಂಕಿತರ ಪರದಾಟ ನಿಂತಿಲ್ಲ. ಸಿದ್ಧತೆ ಮಾಡಿಕೊಳ್ಳದೇ ರಾಜ್ಯವನ್ನು ಇಂತಹ ಸ್ಥಿತಿಗೆ ತಳ್ಳಿದ್ದಾರೆ ಎಂದರು.
ಸರ್ಕಾರದ ಕೊಲೆಗಳು: ಆಕ್ಸಿಜನ್ ನೀಡದೆ ಸೋಂಕಿತರನ್ನು ಸಾಯಿಸುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿರುವ ಕೊಲೆಗಳು, ಸರ್ಕಾರಗಳು ಸತ್ತಿರುವುದರಿಂದಲೇ ನ್ಯಾಯಾಲಯಗಳು ಮಧ್ಯೆ ಪ್ರವೇಶ ಮಾಡಿವೆ. ಈಗಲಾದರೂ ಕೇಂದ್ರ ಸರ್ಕಾರ ಎಚ್ಚೆತ್ತು ಲಸಿಕೆ ಸಂಗ್ರಹಕ್ಕೆ ಮುಂದಾಗಲಿ, 18ವರ್ಷ ಮೀರಿದವರು ರಾಜ್ಯದಲ್ಲಿ 3.26 ಕೋಟಿ ಇದ್ದಾರೆ. ಅವರಿಗೆ ಆರೂವರೆ ಕೋಟಿ ಡೋಸ್ ಲಸಿಕೆ ಬೇಕು. ಎರಡು, ಮೂರು ತಿಂಗಳಲ್ಲಿ ಎಲ್ಲರಿಗೂ ವ್ಯಾಕ್ಸಿನ್ ನೀಡಿದಾಗ ಮಾತ್ರ ಈ ರೋಗ ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಓದಿ: ಕೋವಿಡ್ 3ನೇ ಅಲೆ ಸಾಧ್ಯತೆ : ಕ್ರಿಯಾ ಯೋಜನೆ, ಸಿದ್ಧತೆಗಳ ವರದಿ ಕೇಳಿದ ಹೈಕೋರ್ಟ್