ಬೆಂಗಳೂರು: ಕ್ರೀಡೆಗಳ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯುತ್ತಿದ್ದ ವೇಳೆ ಜೆಡಿಎಸ್ ಸದಸ್ಯ ಶಿವಲಿಂಗೇಗೌಡರನ್ನು ಸ್ವಪಕ್ಷದ ಸದಸ್ಯ ಡಾ. ಕೆ.ಅನ್ನದಾನಿ ಕಿಚಾಯಿಸಿದ ಪ್ರಸಂಗ ವಿಧಾನಸಭೆ ಕಲಾಪದ ವೇಳೆ ನಡೆದಿದೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ, ರಾಜ್ಯದಲ್ಲಿ ಕ್ರೀಡಾಂಗಣಗಳ ಕೊರತೆ ಇದೆ. ಈ ನಿಟ್ಟಿನಲ್ಲಿ ಆದ್ಯತೆ ನೀಡಬೇಕು ಎಂದು ಕ್ರೀಡಾ ಸಚಿವ ನಾರಾಯಣಗೌಡ ಅವರಲ್ಲಿ ಕೇಳಿದರು.
ಆಗ ಮಧ್ಯಪ್ರವೇಶಿಸಿದ ಜೆಡಿಎಸ್ ಶಾಸಕ ಅನ್ನದಾನಿ, ಯಾವ ಕ್ರೀಡೆ? ಎಂದು ಕಿಚಾಯಿಸಿದರು. ಯಾವ ರೀತಿಯ ಕ್ರೀಡೆಗಳು ಎಂದು ಬಿಡಿಸಿ ಹೇಳಿ ಎಂದರು. ಇದಕ್ಕೆ ಸ್ಪಷ್ಟನೆ ನೀಡಿದ ಶಿವಲಿಂಗೇಗೌಡ, ಕ್ರೀಡಾಂಗಣದಲ್ಲಿ ಆಡುವ ಕ್ರೀಡೆ ಎಂದು ನಾನು ಹೇಳಿದ್ದು, ಬೇರೆನೂ ಇಲ್ಲ, 'ಸದಾಶಿವನಿಗೆ ಸದಾ ಅದೇ ಧ್ಯಾನ' ಎಂದು ಹೇಳಿ ಸ್ವಾರಸ್ಯಕರ ಚರ್ಚೆಗೆ ಪೂರ್ಣ ವಿರಾಮ ಹಾಕಿದರು.
ಸಿಡಿ ಮಾಡಿ ಬಿಟ್ಟಾರು ಹುಷಾರು!
ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಚಿವ ಆರ್.ಅಶೋಕ್ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿ ಜೊತೆ ಶಾಸಕರೂ ಹಳ್ಳಿಗೆ ಹೋಗಬೇಕು. ಜಿಲ್ಲಾಧಿಕಾರಿಗಳ ಜೊತೆ ಅವರೂ ಹಳ್ಳಿಗಳಲ್ಲಿ ವಾಸ್ತವ್ಯ ಹೂಡಬೇಕು. ನಾವೂ ಹಳ್ಳಿಗಳಲ್ಲಿ ಮಲಗುತ್ತೇವೆ ಎಂದು ಶಿವಲಿಂಗೇಗೌಡ ಹೇಳಿದರು.
ಆಗ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಅರಗ ಜ್ಞಾನೇಂದ್ರ, ಸಿಡಿಗೀಡಿ ಮಾಡಿಯಾರು ಹುಷಾರು ಎಂದು ಕಿಚಾಯಿಸಿದರು. ಇದಕ್ಕೆ ಉತ್ತರ ಕೊಟ್ಟ ಶಿವಲಿಂಗೇಗೌಡ, ಸಿಡಿ, ಸಿಡಿ ಎಂದು ಚುನಾವಣೆಗೆ ನಿಲ್ಲಬೇಡಿ. ವಿಧಾನಸೌಧಕ್ಕೂ ಬರಬೇಡಿ. ಆ ರೀತಿಯ ಕಸುಬು ಇದ್ದರೆ ತಾನೆ ಸಿಡಿ ಭಯ, ತಪ್ಪು ಮಾಡಿಲ್ಲ ಅಂದರೆ ಭಯ ಪಡುವುದು ಏಕೆ ಎಂದರು.
ಇದನ್ನೂ ಓದಿ: ಚಲನಚಿತ್ರೋತ್ಸವ, ಏರ್ ಶೋ ದುಂದು ವೆಚ್ಚವಲ್ಲ : ಸಚಿವ ಜಗದೀಶ್ ಶೆಟ್ಟರ್