ಬೆಂಗಳೂರು: ಸಿಡಿ ಪ್ರಕರಣ ಸಂಬಂಧ ನಿನ್ನೆ ಕುಟುಂಬಸ್ಥರೊಂದಿಗೆ ಮಾತನಾಡಿದ ಆಡಿಯೋ ಕರೆ ವೈರಲ್ ಆಗುತ್ತಿದ್ದಂತೆ ಯುವತಿ ಇದೀಗ ಮತ್ತೊಂದು ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾಳೆ.
ಅಜ್ಞಾತ ಸ್ಥಳದಿಂದ ನಾಲ್ಕನೇ ವಿಡಿಯೋ ಮಾಡಿದ್ದು, ಮಾಧ್ಯಮಗಳಲ್ಲಿ ಆಡಿಯೋ ಸುದ್ದಿ ಪ್ರಸಾರವಾಗುತ್ತಿದ್ದಂತೆ ವಿಡಿಯೋ ಬಹಿರಂಗವಾಗಿದೆ. ವಿಡಿಯೋದಲ್ಲಿ ಮಾತನಾಡಿರುವ ಯುವತಿ, "ನರೇಶ್ ಎಂಬುವರಿಗೆ ಕರೆ ಮಾಡಿ ಸಿಡಿ ಬಗ್ಗೆ ತಿಳಿಸಿದೆ. ನಾನಿನ್ನೂ ಚಿಕ್ಕವನು ಪೊಲಿಟಿಕಲ್ ಸಪೋರ್ಟ್ ಬೇಕಾಗುತ್ತೆ ಎಂದು ಆತ ಹೇಳಿದ್ದ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಳಿ ತೆರಳಿ ಮಾತಾಡೋಣ. ನನಗಿರುವ ಕಾಂಟಾಕ್ಟ್ ಬಳಸಿ ನಾನು ಕಾಂಟಾಕ್ಟ್ ಮಾಡೋಕೆ ಟ್ರೈ ಮಾಡ್ತೀನಿ. ಡಿಕೆ ಮನೆಗೆ ಹೋಗೋಣ ಎಂದು ಆತ ಹೇಳಿದ್ದ." ಎಂದು ಯುವತಿ ಹೇಳಿದ್ದಾಳೆ.
"ಆಡಿಯೋ ಕ್ಲಿಪ್ ಬಿಡುಗಡೆ ಆಗಿದೆ ಅಂದ್ರೆ ನಮ್ಮ ಫ್ಯಾಮಿಲಿ ಸೇಫ್ ಇಲ್ಲ. ನಾನು ಏನೋ ಹೇಳ್ತೀನಿ, ಅದು ರಿವರ್ಸ್ ಆಗುತ್ತಿದೆ. 24 ದಿನಗಳಿಂದ ತುಂಬಾ ಟಾರ್ಚರ್ ಆಗುತ್ತಿದೆ.. ನಂಗೇನು ಮಾಡಬೇಕು ಎಂದು ಗೊತ್ತಾಗ್ತಿಲ್ಲ. ನಾನು ಸಂತ್ರಸ್ತೆ ಆಗಿರುವುದರಿಂದ ನ್ಯಾಯ ಕೊಡಿಸಿ. ರಮೇಶ್ ಜಾರಕಿಹೊಳಿ ಅವರು ಹೇಳ್ತಾರೆ, ಒಂದು ದಿನದಲ್ಲಿ ಸರ್ಕಾರ ಬೀಳಿಸ್ತೀನಿ ಅಂತ. ಯಾರನ್ನೂ ಬಿಡಲ್ಲ, ಎಷ್ಟೇ ದುಡ್ಡು ಖರ್ಚಾದರೂ ಎಲ್ಲಾರನ್ನೂ ಜೈಲಿಗೆ ಕಳಿಸ್ತೀನಿ ಅಂತಿದ್ದಾರೆ. ಎಷ್ಟೇ ದುಡ್ಡು ಖರ್ಚಾದ್ರೂ ಅಂದ್ರೆ ಏನಿದರ ಅರ್ಥ ? ಅವರ ಬಳಿ ದುಡ್ಡಿದೆ, ನಾಳೆ ಅವರು ನನ್ನ ಕುಟುಂಬವನ್ನ ಸಾಯಿಸ್ಬೋದು. ಎಸ್ಐಟಿಯವರ ಮುಂದೆ ನಮ್ಮ ಅಪ್ಪ ಅಮ್ಮನ ಮುಂದೆನೇ ನಾನು ಹೇಳಿಕೆ ಕೊಡ್ತೀನಿ." ಎಂದು ಯುವತಿ ತಿಳಿಸಿದ್ದಾಳೆ.