ಬೆಂಗಳೂರು/ಬೆಳಗಾವಿ : ಸಿಡಿ ಪ್ರಕರಣದಡಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಎಸ್ಐಟಿ ನೋಟಿಸ್ ಜಾರಿಗೊಳಿಸಿದೆ.
ಏ.20ರಂದು ಸಂಜೆ 4ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ. ಎಸ್ಐಟಿಯ ಇಬ್ಬರು ಅಧಿಕಾರಿಗಳು ಇಂದು ಗೋಕಾಕ್‌ಗೆ ಆಗಮಿಸಿ ರಮೇಶ್ ಜಾರಕಿಹೊಳಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಂಪರ್ಕ ಎಸ್ಐಟಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಹೀಗಾಗಿ, ರಮೇಶ್ ಸಹೋದರ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಚೇರಿಗೆ ನೋಟಿಸ್ ತಲುಪಿಸಿ ಎಸ್ಐಟಿ ಅಧಿಕಾರಿಗಳು ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ರಮೇಶ್ ಜಾರಕಿಹೊಳಿ ಗೋಕಾಕಿನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಎರಡು ದಿನ ಚಿಕಿತ್ಸೆ ಪಡೆದಿದ್ದರು. ನಂತರ ಹೋಮ್ ಐಸೋಲೇಶನ್‌ನಲ್ಲಿದ್ದಾರೆ. ಇದಾದ ನಂತರ ಅವರ ಕೊರೊನಾ ಪರೀಕ್ಷೆಯ ವರದಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.