ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಆರೋಪಿಗಳ ಪತ್ತೆಗೆ ಸೂತ್ರ ಹೆಣೆಯುತ್ತಿರುವ ಎಸ್ಐಟಿ ತಂಡಕ್ಕೆ ಇನ್ನಷ್ಟು ಪೊಲೀಸರು ಸೇರ್ಪಡೆಯಾಗಿದ್ದಾರಂತೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಪತ್ತೆ ಹಚ್ಚಲು ರಚಿಸಲಾಗಿದ್ದ ಎಸ್ಐಟಿ ತಂಡದಲ್ಲಿದ್ದ ಪೊಲೀಸರನ್ನು ಸಿಡಿ ಪ್ರಕರಣದಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆಯಂತೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗಿತ್ತು. ಸಿಡಿ ಪ್ರಕರಣದಲ್ಲಿ ಸಹ ಎಸ್ಐಟಿ ತಂಡಗಳನ್ನು ರಚಿಸಲಾಗಿದೆ. ಸದ್ಯ ಡಿಸಿಪಿ ಹರೀಶ್ ಪಾಂಡೆ, ಮೂವರು ಎಸಿಪಿ, 10 ಜನ ಇನ್ಸ್ಪೆಕ್ಟರ್ಗಳು, 30 ಜನ ಇತರೆ ಸಿಬ್ಬಂದಿ ಎಸ್ಐಟಿಗೆ ಸೇರ್ಪಡೆಯಾಗಿದ್ದಾರೆಂದು ತಿಳಿದುಬಂದಿದೆ.
ಪ್ರತಿ ತಂಡಕ್ಕೆ ಒಂದೊಂದು ಜವಾಬ್ದಾರಿ ವಹಿಸಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ತನಿಖೆಯ ಸಾರಥ್ಯವಹಿಸಿದ್ದು, ಎಸ್ಐಟಿ ಡಿಸಿಪಿ ಅನುಚೇತ್ ಹಾಗೂ ಡಿಸಿಪಿ ಹರೀಶ್ ಪಾಂಡೆ ತನಿಖೆಯ ನೇತೃತ್ವ ವಹಿಸಿದ್ದಾರೆ. ಡಿಸಿಪಿ ರವಿಕುಮಾರ್ ಶಂಕಿತರ ಪತ್ತೆ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ. ಸೈಬರ್ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬುಗೆ ಟೆಕ್ನಿಕಲ್ ವರ್ಕ್, ಮೊಬೈಲ್ ಕರೆಗಳು ಸೇರಿ ಇತರೆ ತಾಂತ್ರಿಕ ಕೆಲಸ ನೀಡಲಾಗಿದೆ. ಎಸಿಪಿ ಧರ್ಮೇಂದ್ರ ಹಾಗೂ ನಾಗರಾಜ್ಗೆ ಶಂಕಿತರ ಮಾನಿಟರಿಂಗ್ ಹಾಗೂ ಸಿಸಿಬಿ ಇನ್ಸ್ಪೆಕ್ಟರ್ಗಳನ್ನು ಆರೋಪಿಗಳ ಪತ್ತೆಗಾಗಿ ಹೊರ ರಾಜ್ಯಗಳಲ್ಲಿ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಇದನ್ನೂ ಓದಿ: ಪೊಲೀಸ್ ಕಾನ್ಸ್ಟೇಬಲ್ಗೆ ಹಿಗ್ಗಾ ಮುಗ್ಗಾ ಥಳಿಸಿದ ಗ್ರಾಮಸ್ಥರು! ವಿಡಿಯೋ...
ಎಸ್ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಅವರಿಗೆ ಆಯಾ ತಂಡಗಳು ಪ್ರತಿದಿನದ ಅಪ್ಡೇಟ್ ಮಾಡಬೇಕು. ಕಲೆಹಾಕಿದ ಎಲ್ಲಾ ಮಾಹಿತಿ ಆಧಾರದಲ್ಲಿ ತನಿಖೆ ನಡೆಯಲಿದೆ. ಗೌರಿ ಲಂಕೇಶ್ ಕೇಸ್ನಲ್ಲಿ ಇದೇ ಮಾದರಿಯಲ್ಲಿ ತನಿಖೆ ನಡೆಸಲಾಗಿತ್ತು ಎನ್ನಲಾಗಿದೆ.