ಬೆಂಗಳೂರು : ರಾಸಲೀಲೆ ಪ್ರಕರಣ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ನಾಲ್ಕು ಗಂಟೆಗಳ ಕಾಲ ಎಸ್ಐಟಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಆಡುಗೋಡಿಯ ಟೆಕ್ನಿಕಲ್ ಸೆಂಟರ್ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಜಾರಿ ಮಾಡಿದ್ದ ನೊಟೀಸ್ ಅನ್ವಯ ಸಂಜೆ 5 ಗಂಟೆಗೆ ಖುದ್ದು ಹಾಜರಾಗಿ ವಿಚಾರಣೆ ಎದುರಿಸಿದರು.
ಸಿಡಿ ಸಂಬಂಧ ಈವರೆಗೂ 30ಕ್ಕೂ ಅಧಿಕ ಮಂದಿಯನ್ನ ವಿಚಾರಣೆ ನಡೆಸಿದ್ದ ಎಸ್ಐಟಿ ಅಧಿಕಾರಿಗಳಿಗೆ ದೊರೆತ ಕೆಲ ಮಹತ್ವದ ಮಾಹಿತಿ ಆಧರಿಸಿ ಮಾಜಿ ಸಚಿವರನ್ನು ವಿಚಾರಣೆಗೊಳಪಡಿಸಿದ್ದರು.
ಸಿಡಿ ಬಿಡುಗಡೆಗೂ ಮುನ್ನ ಇದೇ ವಿಚಾರವಾಗಿ ಯಾರಾದರೂ ನಿಮ್ಮನ್ನು ಸಂಪರ್ಕಿಸಿದ್ದರೇ..? ಈ ವೇಳೆ ಹಣದ ಬಗ್ಗೆ ಡಿಮ್ಯಾಂಡ್ ಮಾಡಲಾಗಿತ್ತಾ..? ಜೊತೆಗೆ ಈಗಾಗಲೇ ಸಿಡಿ ಕೇಸ್ನಲ್ಲಿ ಕೆಲವರ ಹೆಸರು ಸೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಎಸ್ಐಟಿ ತನಿಖಾಧಿಕಾರಿ ಧರ್ಮೇಂದ್ರ ವಿಚಾರಣೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ ಸಿಡಿ ಷಡ್ಯಂತ್ರದ ಬಗ್ಗೆ ಜಾರಕಿಹೊಳಿಯವರ ನಿವಾಸದಲ್ಲೇ ಎಸ್ಐಟಿ ವಿಚಾರಣೆ ನಡೆಸಿತ್ತು. ದೂರು ನೀಡಿದ ಬಳಿಕ ಎಸ್ಐಟಿಯಿಂದ ಕೆಲ ಮಾಹಿತಿ ಪಡೆಯಲಾಗಿತ್ತು. ಇದಾದ ಬಳಿಕ ಎರಡನೇ ಬಾರಿ ಎಸ್ಐಟಿ ವಿಚಾರಣೆ ಎದುರಿಸಿದ್ದಾರೆ.