ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಇಂದು ಇನ್ನೊಂದು ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಪ್ರಕರಣ ಸಂಬಂಧ ತನಿಖಾಧಿಕಾರಿಗಳ ಮುಂದೆ ಉಲ್ಟಾ ಹೇಳಿಕೆ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಬಗ್ಗೆ ಸ್ಪಷ್ಟನೆ ನೀಡಿದ್ದಾಳೆ.
ಸಿಆರ್ಪಿಸಿ 164 ರ ಅಡಿ ನ್ಯಾಯಾಧೀಶರ ಮುಂದೆ ನೀಡಿದ್ದ ಹೇಳಿಕೆಗೆ ನಾನು ಬದ್ಧಳಾಗಿದ್ದೇನೆ. ನನ್ನ ಪೋಷಕರೊಂದಿಗೆ ಮಾತನಾಡಿ ಮನ ಪರಿವರ್ತನೆಗೊಂಡು ಪ್ರಕರಣದಿಂದ ಹಿಂದೆ ಸರಿಯುತ್ತಿದ್ದೇನೆ ಎನ್ನುವುದು ಕೇವಲ ವದಂತಿ ಎಂದು ಸ್ಪಷ್ಟಪಡಿಸಿದ್ದಾಳೆ.
ಇಂದು ಬಿಡುಗಡೆಯಾದ ವಿಡಿಯೋದಲ್ಲಿ ಸಿಡಿ ಲೇಡಿ ಹೇಳಿದ್ದೇನು?: "ಮಾಧ್ಯಮದಲ್ಲಿ ಕೆಲವು ವಿಚಾರಗಳನ್ನು ನಾನು ಎಸ್ಐಟಿಯಿಂದ ಬಂದ ತಕ್ಷಣ ನೋಡಿದೆ. ಮಾಧ್ಯಮಗಳಲ್ಲಿ ಹನಿಟ್ರ್ಯಾಪ್, ಉಲ್ಟಾ ಹೊಡೆದೆ ಅಂತೆಲ್ಲಾ ಬರುತ್ತಾ ಇತ್ತು. ಅದು ಯಾವುದೂ ನಿಜವಲ್ಲ. ಅದೆಲ್ಲ ಶುದ್ಧ ಸುಳ್ಳು. ನಾನು ಎಸ್ಐಟಿಗೆ ಹೋಗಿದ್ದು ನಿಜ. ನಾನು ಅಲ್ಲಿಗೆ ಹೋಗಿ ಸಾಕ್ಷಿ ಒದಗಿಸಬೇಕಿತ್ತು. ಆ ಸಂಬಂಧ ಅವರ ಬಳಿ ಮಾತನಾಡಲು ಹೋಗಿದ್ದೆ. ಆದರೆ ಈಚೆ ಬಂದು ನೋಡಿದಾಗ ಇನ್ನೇನೋ ಬೇರೆ ಥರಾ ತೋರಿಸುತ್ತಿದ್ದರು" ಎಂದು ಹೇಳಿದ್ದಾಳೆ.
"ಮೀಡಿಯಾದವರಿಗೆ ಹೇಳುವುದು ಇಷ್ಟೆ, ಏನು ಸತ್ಯ, ಯಾವುದು ಸುಳ್ಳು ಅದನ್ನು ಅರ್ಥ ಮಾಡಿಕೊಂಡು ಆಮೇಲೆ ಜನರಿಗೆ ಅದನ್ನು ತೋರಿಸಿದರೆ ಒಳ್ಳೆಯದು ಅನಿಸುತ್ತೆ. ಸುಳ್ಳು ಹೇಳಬಾರದು ಅಂತಾ ನಾನು ಎಲ್ಲರಿಗೂ ಕೇಳಿಕೊಳ್ಳುತ್ತೇನೆ. ಆಮೇಲೆ ನಾನು ಏನನ್ನೋ ಬರೆದುಕೊಟ್ಟು ಸಹಿ ಮಾಡಿದ್ದೀನಿ ಅಂತೆಲ್ಲಾ ಹೇಳುತ್ತಿದ್ದಾರೆ. ಆದರೆ ನಾನು ಯಾವುದೇ ಪತ್ರವನ್ನೂ ಬರೆದು ಕೊಟ್ಟಿಲ್ಲ. ಯಾವ ಪೇಪರ್ ಮೇಲೆನೂ ನಾನು ಸಹಿ ಮಾಡಿಲ್ಲ. ನಾನು ಇವತ್ತು ಹೋಗಿ ಎವಿಡೆನ್ಸ್ ಬಗ್ಗೆ ಮಾತಾಡಿದ್ದು ನಿಜ" ಎಂದು ತಿಳಿಸಿದ್ದಾಳೆ.
ಇದನ್ನೂ ಓದಿ: ಎಸ್ಐಟಿ ಮುಂದೆ ಸಿಡಿ ಲೇಡಿ ತದ್ವಿರುದ್ಧ ಹೇಳಿಕೆ ನೀಡಿಲ್ಲ: ಯುವತಿ ಪರ ವಕೀಲರ ಸ್ಪಷ್ಟನೆ
"ನಾನು ನಮ್ಮ ಅಪ್ಪ-ಅಮ್ಮನ ಬಳಿ ಮಾತನಾಡಿದೆ, ಮೀಟ್ ಮಾಡಿದೆ ಅಂತಾ ಹೇಳ್ತಿದ್ದಾರೆ. ನಾನು ನಮ್ಮ ತಂದೆ-ತಾಯಿ ಬಳಿ ಫೋನ್ನಲ್ಲಿ ಮಾತನಾಡಿದೆ. ಹಾಗಂತಾ ಅವರೇನೂ ನನ್ನ ಮನವೊಲಿಸಿಲ್ಲ. ಮನವೊಲಿಸಿದರೂ ನಾನು ಸತ್ಯವನ್ನೇ ಹೇಳಬೇಕು. ಸುಳ್ಳು ಹೇಳಲು ಆಗುವುದಿಲ್ಲ. ಸಿಆರ್ಪಿಸಿ 164 ರ ಅಡಿ ನ್ಯಾಯಾಧೀಶರ ಮುಂದೆ ನೀಡಿದ್ದ ಹೇಳಿಕೆಗೆ ನಾನು ಬದ್ಧಳಾಗಿದ್ದೇನೆ" ಎಂದಿದ್ದಾಳೆ.
"ಪ್ರಕಣರದಲ್ಲಿ ನನ್ನ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ವಿಚಾರಣೆ ನಡೆಸಿರುವ ಎಸ್ಐಟಿ ಇದೀಗ ಸಂಬಂಧಿಕರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದೆ. ಇಲ್ಲಿ ಪ್ರಕರಣದ ಆರೋಪಿಗೆ ಕೋವಿಡ್ ಸೋಂಕಿತ ಎಂದು ಬಿಟ್ಟಿದ್ದಾರೆ. ಮೊದಲು ಅವರನ್ನು ವಿಚಾರಣೆಗೆ ಒಳಪಡಿಸಬೇಕು" ಎಂದು ಯುವತಿ ಮನವಿ ಮಾಡಿದ್ದಾಳೆ.